Tuesday, June 28, 2022

Latest Posts

ರಾಜ್ಯಸಭಾ ಸದಸ್ಯ, ಕೇರಳ ಮೂಲದ ಎಲ್ ಜೆಡಿ ಹಿರಿಯ ನೇತಾರ ಎಂ.ಪಿ.ವೀರೇಂದ್ರ ಕುಮಾರ್ ವಿಧಿವಶ

ಕಾಸರಗೋಡು: ರಾಜ್ಯಸಭಾ ಸದಸ್ಯ ಹಾಗೂ ಲೋಕತಾಂತ್ರಿಕ ಜನತಾದಳದ (ಎಲ್​ಜೆಡಿ) ಮುಖಂಡ ಎಂ.ಪಿ.ವೀರೇಂದ್ರ ಕುಮಾರ್​ (83) ಹೃದಯಾಘಾತಕ್ಕೆ ಒಳಗಾಗಿ ಗುರುವಾರ ತಡರಾತ್ರಿ ನಿಧನರಾದರು.

ಕೇಂದ್ರ ವಿತ್ತ ಖಾತೆಯ ಮಾಜಿ ಸಹಾಯಕ ಸಚಿವರಾಗಿದ್ದ ಅವರು ಮಾತೃಭೂಮಿ ಮಲಯಾಳಂ ಮಾಧ್ಯಮ ಸಮೂಹದ ಮೇನೇಜಿಂಗ್​ ಡೈರೆಕ್ಟರ್​ (ಎಂಡಿ) ಆಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಪತ್ನಿ ಉಷಾ, ಪುತ್ರಿಯರಾದ ಆಶಾ, ನಿಶಾ ಮತ್ತು ಜಯಲಕ್ಷ್ಮಿ, ಪುತ್ರನಾದ ಮಾಜಿ ಶಾಸಕ ಹಾಗೂ ಎಲ್​ಜೆಡಿಯ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ.ಶ್ರೇಯಾಮ್ಸ್​ ಕುಮಾರ್​ ಅವರನ್ನು ಅಗಲಿದ್ದಾರೆ. ಎಂ.ಪಿ.ವೀರೇಂದ್ರ ಕುಮಾರ್​ ಅವರು ಸಮಾಜವಾದಿ ನಾಯಕ ಎಂ.ಕೆ.ಪದ್ಮಪ್ರಭ ಗೌಡರ್​ ಮತ್ತು ಮರುದೇವಿ ಅವ್ವ ಅವರ ಪುತ್ರರಾಗಿದ್ದಾರೆ.

ಕೇರಳದ ವಯನಾಡ್​ ಜಿಲ್ಲೆಯ ಕಾಲ್​ಪೆಟ್ಟಾದಲ್ಲಿ ಜನಿಸಿದ್ದರು. ಚೆನ್ನೈನ ವಿವೇಕಾನಂದ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಅಮೆರಿಕಾದ ಓಹಿಯೋದ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದರು.

ಅಂದಿನ ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ್​ ನಾರಾಯಣ್​ ಅವರಿಂದ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದ ಇವರು, 1968ರಿಂದ 1970ರ ನಡುವೆ ಸಂಯುಕ್ತ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಜನತಾಪಾರ್ಟಿ ಸೇರಿದ್ದಲ್ಲದೆ ನಂತರ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೀರೇಂದ್ರ ಕುಮಾರ್​ ಜೈಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಇವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. 1987ರಲ್ಲಿ ಶಾಸಕರಾಗಿ ಆಯ್ಕೆಯಾದ ಇವರು ಇ.ಕೆ.ನಾಯನಾರ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡು ಅರಣ್ಯ ಸಚಿವಾಗಿ ಕೆಲಸ ಮಾಡಿದ್ದರು. ಅರಣ್ಯನಾಶದ ವಿರುದ್ಧ ಸೆಟೆದು ನಿಂತು ಆ ಬಗ್ಗೆ ಆದೇಶ ಹೊರಡಿಸಿದ್ದ ಇವರು 48 ಗಂಟೆಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.

1996ರಲ್ಲಿ ಕೋಝಿಕ್ಕೋಡು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಇವರು ವಿತ್ತ ಖಾತೆಯ ಸಹಾಯಕ ಸಚಿವರಾಗಿದ್ದರು. ಬಳಿಕ ಕರ್ನಾಟಕದ ಎಚ್.ಡಿ.ದೇವೇಗೌಡ ಹಾಗೂ ಐ.ಕೆ.ಗುಜ್ರಾಲ್​ ನೇತೃತ್ವದ ಯುನೈಟೆಡ್​ ಫ್ರಂಟ್​ ಸರ್ಕಾರಗಳಲ್ಲಿ ಕಾರ್ಮಿಕ ಖಾತೆಯ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಪುನಃ ಲೋಕಸಭೆಗೆ ಆಯ್ಕೆಯಾಗಿದ್ದರು. 2016ರ ನಂತರದಿಂದ ಇವರು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss