ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೀಪಾವಳಿ ನಂತರ ತಮ್ಮ ಸರ್ಕಾರವು ರಾಜ್ಯಾದ್ಯಂತ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲಿದೆ ಎಂದು ಹೇಳಿದ್ದಾರೆ. ಪಟಾಕಿಗಳನ್ನು ಸುಡದಂತೆ ಮತ್ತು ಹಬ್ಬದ ಸಮಯದಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಜನರನ್ನು ಉದ್ದೇಶಿ ಮಾತನಾಡಿದ ಅವರು, ‘ದೇವಸ್ಥಾನಗಳು ಮತ್ತು ಪೂಜಾ ಸ್ಥಳಗಳನ್ನು ಶೀಘ್ರದಲ್ಲೇ ತೆರೆಯುತ್ತೇವೆ. ದೀಪಾವಳಿಯನ್ನು ಆಚರಿಸೋಣ. ಆದರೆ ನಾವು ದೇವಸ್ಥಾನಗಳನ್ನು ತೆರೆದರೂ, ನೀವು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು’ ಎಂದರು.
‘ದೀಪಾವಳಿ ನಂತರ ದೇವಸ್ಥಾನಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ನನ್ನನ್ನು ಟೀಕಿಸುವವರು ಮುಂದುವರಿಯಲಿ. ನನ್ನ ಮಹಾರಾಷ್ಟ್ರದ ಸುರಕ್ಷತೆಗಾಗಿ ನಾನು ಎಲ್ಲ ಟೀಕೆಗಳನ್ನು ಎದುರಿಸುತ್ತೇನೆ’ ಎಂದರು.
‘ಉಸಿರಾಟದ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಾಲಿನ್ಯದಿಂದ ದೆಹಲಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಪಟಾಕಿಗಳನ್ನು ನಿಷೇಧಿಸಬಹುದಿತ್ತು, ಆದರೆ ನಾವು ಅದನ್ನು ಮಾಡುತ್ತಿಲ್ಲ. ನೀವು ಯಾವಾಗಲೂ ನನ್ನ ಮಾತನ್ನು ಕೇಳಿರುತ್ತೀರಿ. ದೀಪಗಳನ್ನು ಬೆಳಗಿಸಿ, ದೀಪಾವಳಿ ಆಚರಿಸಿ. ಪಟಾಕಿಗಳನ್ನು ಹಚ್ಚೋದನ್ನು ನಿಲ್ಲಿಸಿ ಎಂದು ಜನತೆಯಲ್ಲಿ ಉದ್ಧವ್ ಠಾಕ್ರೆ ಮನವಿ ಮಾಡಿದರು.