Friday, August 19, 2022

Latest Posts

ರಾಜ್ಯ ಸರಕಾರದಿಂದ ಜನ ಸಂಕಷ್ಟಗಳಿಗೆ ಸ್ಪಂದನೆ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ಬಾಗಲಕೋಟೆ: ರಾಜ್ಯ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸರಕಾರದ ಸಾಧನೆಯ ಕಿರು ಹೊತ್ತಿಗೆಯನ್ನು ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ಬಾಗಲಕೋಟೆ ಆಡಿಟೋರಿಯಂ ಹಾಲ್‍ನಲ್ಲಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಜರುಗಿದ ಸರಕಾರದ ಒಂದು ವರ್ಷದ ಪ್ರಧಾನ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಿ ಸಾಧನೆಯ ಕಿರು ಹೊತ್ತಿಗೆ, ಜನಪದ ಮತ್ತು ಮಾರ್ಚ ಆಪ್ ಕರ್ನಾಟಕ ಮಾಸ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಜನ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಅತ್ಯುತ್ತಮ ಆಡಳಿತ ನೀಡಿದೆ ಎಂದರು.
ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬರದ ಛಾಯೆ ಮೂಡಿದ್ದು, ಇದರ ಬೆನ್ನಲ್ಲೆ ಪ್ರವಾಹ ಬಂದೊದಗಿತ್ತು. ಇದರಿಂದ ಜನ ಸಂಕಷ್ಟಕ್ಕೆ ಒಳಗಾಗಿ ಮನೆ, ಬೆಳೆ ಕಳೆದುಕೊಳ್ಳುವಂತಾಯಿತು. ಇಂತಹ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ರಚನೆಯಾಗದಿದ್ದರೂ ಸಹ ಏಕಾಂಗಿಯಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಯಿತು. ಬರ ಮತ್ತು ಪ್ರವಾಹದಿಂದಾಗಿ ಸುಮಾರು 35 ಸಾವಿರ ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದ್ದು, ಸಂತ್ರಸ್ತರಿಗೆ ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಒದಗಿಸಿ, ಹಾನಿಗೀಡಾದ ರಸ್ತೆ, ಸೇತುವೆ, ಶಾಲಾ-ಕಾಲೇಜುಗಳ ದುರಸ್ತಿ ಮಾಡಿಸಿ, ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ.ಗಳನ್ನು ನೀಡುವ ಮೂಲಕ ಉಳಿದ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಪ್ರವಾಹದ ಜೊತೆಗೆ ಭಯಾನಕರವಾದ ಸಾಂಕ್ರಾಮಿಕ ಪಿಡುಗಾದ ಕೋವಿಡ್ ದೇಶಕ್ಕೆ ಹಬ್ಬಿ ಅವಾಂತರ ಸೃಷ್ಟಿ ಮಾಡಿತು. ಈ ಕೋವಿಡ್ ನಿರ್ವಹಣೆಗೆ ಯುದ್ದೋಪಾದಿಯಲ್ಲಿ ಸಿದ್ದತೆಯನ್ನು ನಡೆಸಿತು. ಪರಿಣಿತ ವೈದ್ಯರ ಕಾರ್ಯಪಡೆ ಮತ್ತು ಅಧಿಕಾರಿಗಳ ಕಾರ್ಯಪಡೆಯನ್ನು ರಚಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ನಿಭಾಯಿಸುವ ಕೆಲಸ ಮಾಡಲಾಗುತ್ತಿದೆ. ಲಾಕ್‍ಡೌನ್‍ದಿಂದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳ ನಿರ್ಬಂಧನೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದನ್ನು ಕಂಡ ರಾಜ್ಯ ಸರಕಾರ ಎಲ್ಲ ವರ್ಗದ ಜನತೆಯ ಆರ್ಥಿಕ ಸಂಕಷ್ಟವನ್ನು ನಿವಾರಿಸಲು 2270 ಕೋಟಿ ರೂ.ಗಳ ವಿಶೇಷ ಪ್ಯಾಕೇಜ ಘೋಷಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವತಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!