ಹೊಸದಿಗಂತ ವರದಿ, ಕುಶಾಲನಗರ:
ಇಲ್ಲಿಗೆ ಸಮೀಪದ ಕೂಡಿಗೆಯಲ್ಲಿರುವ ಜಿಲ್ಲಾ ಕೋಳಿ ಸಾಕಾಣಿಕಾ ಕೇಂದ್ರದಲ್ಲಿ ಪ್ರಥಮ ಬಾರಿಗೆ ನಾಟಿ ಕೋಳಿ ಸಾಕಾಣಿಕೆ ಆರಂಭಗೊಂಡಿದೆ.
ರಾಜ್ಯ ಸರಕಾರದ ಪಶು ವೈದ್ಯಕೀಯ ಇಲಾಖೆ ಅಧೀನದಲ್ಲಿರುವ ಈ ಕೇಂದ್ರದಲ್ಲಿ ಕಳೆದ 50 ವರ್ಷಗಳಿಂದಲೂ ಗಿರಿರಾಜ ಮತ್ತು ಇತರೆ ಹೈಬ್ರೀಡ್ ತಳಿಗಳ ಕೋಳಿಗಳನ್ನು ಸಾಕಾಣಿಕೆ ಮಾಡಿ ಅವುಗಳಿಂದ ಮೊಟ್ಟೆಗಳ ಉತ್ಪಾದಿಸಲಾಗುತ್ತಿದ್ದು., ಆದರೆ ಇದೀಗ ರಾಜ್ಯ ಸರಕಾರ ನಾಟಿ ಕೋಳಿ ಸಾಕಾಣಿಗೆ ಒತ್ತು ನೀಡುವ ನೂತನ ಯೋಜನೆ ಆರಂಭಿಸಿದ್ದು, ಅದರನ್ವಯ ನಾಟಿ ಕೋಳಿಗಳನ್ನು ಸಾಕಿ ಅವುಗಳು ಇಡುವ ಮೊಟ್ಟೆಗಳನ್ನು ಪುನಃ ಮರಿ ಮಾಡಿ ರೈತರಿಗೆ ವಿವಿಧ ಯೋಜನೆಯಡಿ ವಿತರಿಸಲಿದೆ ಎನ್ನಲಾಗಿದೆ.
ಅದರಂತೆ ಇದೀಗ ರಾಜ್ಯದಲ್ಲೇ ಪ್ರಥಮವಾಗಿ ಕೂಡಿಗೆಯ ಜಿಲ್ಲಾ ಕೋಳಿ ಸಾಕಾಣಿಕೆ ಕೇಂದ್ರದ ಮೂಲಕ ನಾಟಿ ಕೋಳಿ ಸಾಕಾಣಿಕೆ ಮಾಡುವ ಹೊಸ ಯೋಜನೆ ಆರಂಭವಾಗಿದ್ದು, ಈ ಕೇಂದ್ರದಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ನಾಟಿ ಕೋಳಿ ಮೊಟ್ಟೆಗಳನ್ನು ಖಾಸಗಿ ಕೋಳಿ ಸಾಕಾಣಿಕೆ ಕೇಂದ್ರದಿಂದ ತಂದು ಮರಿಗಳನ್ನು ಮಾಡುವ ಕೆಲಸ ಅರಂಭವಾಗಿದೆ.
ಮೊದಲ ಹಂತದಲ್ಲಿ 350 ಮರಿಗಳನ್ನು ಮಾಡಿಸಲಾಗಿದ್ದು, 15 ದಿನಗಳ ನಂತರ ಎರಡನೇ ಹಂತದಲ್ಲಿ 450 ಮರಿಗಳನ್ನು ಮಾಡಿಸಲಾಗಿದೆ. ನಂತರ ಈ ಮರಿಗಳನ್ನು ಸಾಕಿ 5 ತಿಂಗಳ ನಂತರ ಇವುಗಳು ಮೊಟ್ಟ್ಟೆ ಇಡಲು ಪ್ರಾರಂಭಿಸಿದ ಬಳಿಕ ಆ ಕೋಳಿ ಮರಿ ಮತ್ತು ಮೊಟ್ಟೆಗಳನ್ನು ಸರಕಾರದ ಇಲಾಖೆಯ ನಿಯಮನುಸಾರವಾಗಿ ಬೇರೆ ಬೇರೆ ಜಿಲ್ಲಾ ಮಟ್ಟದ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಸರಬರಾಜು ಮಾಡುವ ಚಿಂತನೆ ಇದೆ ಎಂದು ಕೂಡಿಗೆ ಕೋಳಿ ಸಾಕಾಣಿಕೆ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಜೀವ ಕುಮಾರ್ ಆರ್. ಶಿಂಧೆ ತಿಳಿಸಿದ್ದಾರೆ.