ಹೊಸದಿಗಂತ ಆನ್ಲೈನ್ ಡೆಸ್ಕ್:
ಶಿವಮೊಗ್ಗದಲ್ಲಿ ಕಳೆದ ರಾತ್ರಿ ಬಲವಾಗಿ ಭೂಮಿ ಕಂಪಿಸಿದ್ದು, ಜನ ರಾತ್ರೋ ರಾತ್ರಿ ಮನೆಯಿಂದ ಹೊರಬಂದಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ರಾತ್ರಿಯಿಡೀ ಭೂಕಂಪ ಎಂದುಕೊಂಡು ಜನ ಭಯಭೀತರಾಗಿದ್ದು, ನಡೆದದ್ದು ಭೂಕಂಪ ಅಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.
ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿದ್ದು,15 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ. ಜಿಲೆಟಿನ್ ತುಂಬಿದ ಲಾರಿ ಶಿವಮೊಗ್ಗದ ಹುಣಸೋಡು ಬಳಿಯ ರೈಲ್ವೆ ಕ್ಯಾರಿಯತ್ತ ತೆರಳುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಬ್ಲಾಸ್ಟ್ಗೆ ಕಾರಣ ತಿಳಿದುಬಂದಿಲ್ಲ.
ಲಾರಿಯಲ್ಲಿ 50 ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳ ಬಾಕ್ಸ್ ಇದ್ದು, ಬಹುತೇಕ ಬ್ಲಾಸ್ಟ್ ಆಗಿದೆ. ಇದರ ತೀವ್ರತೆಯಿಂದಾಗಿ ಲಾರಿ ಛಿದ್ರವಾಗಿದೆ. ಲಾರಿಯಲ್ಲಿದೆ ಬಿಹಾರ ಮೂಲದ 15 ಮಂದಿ ಕಾರ್ಮಿಕರ ದೇಹವೂ ಛಿದ್ರವಾಗಿದೆ. ಮೃತರ ಗುರುತು ಪತ್ತೆಯಾಗದಷ್ಟು ತೀವ್ರತೆಯಲ್ಲಿ ಸ್ಫೋಟವಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಮಾಡಬೇಕಾಯಿತು ಎನ್ನಲಾಗಿದೆ.