ರಾಮನಗರ : ಪೋಷಣಾ ಅಭಿಯಾನ ಯೋಜನೆಯಡಿ ಸರ್ಕಾರ ನೀಡಿರುವ ಸ್ಮಾರ್ಟ್ ಫೋನ್ ಅನ್ನು ಸದ್ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಅಂಗನವಾಡಿ ಕಾರ್ಯಕರ್ತೆಯರು ಕಂಕಣ ಬದ್ಧರಾಗಬೇಕು ಎಂದು ತಹಸೀಲ್ದಾರ್ ನಾಗೇಶ್ ಕಿವಿಮಾತು ಹೇಳಿದರು. ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಫೋನ್ ವಿತರಿಸಿ ಅವರು ಮಾತನಾಡಿದರು. ಸ್ಮಾರ್ಟ್ ಫೋನ್ ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಿದ್ದರೂ, ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೂ ಫೋನ್ ವಿತರಿಸುವಲ್ಲಿ ಜಿಲ್ಲಾಡಳಿತ ಹಾಗೂ ಇಲಾಖೆ ಈಗಾಗಲೇ ಕ್ರಮವಹಿಸಿದೆ. ಅಂತೆಯೇ ತಾಲ್ಲೂಕಿನಲ್ಲಿಯೂ ಸುಮಾರು ೩೩೪ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಮಾಡಿಕೊಂಡು ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ದಕ್ಷತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿ ಹೇಳಿದರು. ಎಸಿಡಿಪಿಒ ಅಹಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡುವುದು ಬಹು ದಿನಗಳ ಬೇಡಿಕೆಯಾಗಿತ್ತು. ಇದೀಗ ಕಾರ್ಯಕರ್ತೆಯರ ಕೈಗೆ ಸ್ಮಾರ್ಟ್ ಫೋನ್ ಬಂದಿವೆ. ಇನ್ನು ಮುಂದೆ ಇಲಾಖೆ ನೀಡುವ ಆಪ್ ಮೂಲಕ ಕಾರ್ಯಕರ್ತೆಯರು ಕೆಲಸ ಮಾಡಬೇಕಾಗುತ್ತದೆ ಎಂದರು. ಅಂಗನವಾಡಿ ಸಿಬ್ಬಂದಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಇದು ಸಹಕಾರಿಯಾಗಲಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪೌಷ್ಟಿಕ ಆಹಾರ ನೀಡುವ ದಿಕ್ಕಿನಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಮಾಹಿತಿಯನ್ನು ಬೆರಳ ತುದಿಯಲ್ಲಿಯೇ ಸಂಗ್ರಹ ಮಾಡಿಟ್ಟುಕೊಳ್ಳುವುದರ ಜೊತೆಗೆ, ಕಾಲ ಕಾಲಕ್ಕೆ ಏನೇನು ಕೆಲಸ ಮಾಡಬೇಕು ಹಾಗೂ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಕಾಲಕಾಲದ ಮಾಹಿತಿಯನ್ನು ಸ್ಮಾರ್ಟ್ ಫೋನ್ ಒದಗಿಸಲಿದೆ ಎಂದು ತಿಳಿಸಿದರು. ತಾಪಂ ಇಒ ಚಂದ್ರು, ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಕೆ.ಸಿದ್ದಲಿAಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಮಮತಾ ಪ್ರಾರ್ಥಿಸಿದರು. ಸುಲೋಚನಾ ನಿರೂಪಿಸಿದರು. ಸುರೇಖಾ ಕುಲಕರ್ಣಿ ವಂದನಾರ್ಪಣೆ ಸಲ್ಲಿಸಿದರು.