ರಾಮನಗರ: ತಾಲೂಕಿನ ಬಿಡದಿ ಹೋಬಳಿ ಶೇಷಗಿರಿಹಳ್ಳಿ ಗ್ರಾಮದ ಬಳಿ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ -೨೭೫ರಲ್ಲಿ ಶೇಷಗಿರಿಹಳ್ಳಿ – ಐನೋರಪಾಳ್ಯದ ನಡುವೆ ಅಂಡರ್ ಪಾಸ್ (ಕೆಳ ರಸ್ತೆ) ನಿರ್ಮಿಸುವಂತೆ ಒತ್ತಾಯಿಸಿ ಸುತ್ತಮುತ್ತಲ ಗ್ರಾಮಸ್ಥರು ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು. ಶೇಷಗಿರಿ ಹಳ್ಳಿ, ಮಂಚನಾಯ್ಕನಹಳ್ಳಿ, ಐನೋರಪಾಳ್ಯ, ದ್ಯಾವಲಿಂಗಯ್ಯನ ಪಾಳ್ಯ, ಮುತ್ತರಾಯನಗುಡಿಪಾಳ್ಯ, ಶೇಷಗಿರಿಹಳ್ಳಿ ಕಾಲೋನಿ ಹಾಗೂ ಗಿರಿಯಪ್ಪನದೊಡ್ಡಿಯ ಗ್ರಾಮಸ್ಥರು ಮುತ್ತರಾಯಸ್ವಾಮಿ ದೇವಾಲಯದ ಬಳಿ ಅಂಡರ್ ಪಾಸ್ ನಿರ್ಮಿಸದೆ ಹೆದ್ದಾರಿ ಕಾಮಗಾರಿ ಮಾಡದಂತೆ ಪಟ್ಟು ಹಿಡಿದರು.
ಕೇಂದ್ರ ಸರ್ಕಾರವು ಬೆಂಗಳೂರುಮೈಸೂರು ರಸ್ತೆ, ರಾಜ್ಯ ಹೆದ್ದಾರಿ-೧೭ ಅನ್ನು ರಾಷ್ಟ್ರೀಯ ಹೆದ್ದಾರಿ ೨೭೫ಆಗಿ ಮೇಲ್ದರ್ಜೆಗೆ ಏರಿಸಿ ನಾಲ್ಕು ಪಥದ ಹೆದ್ದಾರಿಯನ್ನು ೮ ಪಥದ ರಸ್ತೆಯಾಗಿ ಮಾರ್ಪಡಿಸುವ ಕಾಮಗಾರಿ ನಡೆಯುತ್ತಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆ ಬ್ಯಾರಿಕೆಡ್ ನಿರ್ಮಾಣ ಮಾಡುತ್ತಿದ್ದು, ಸದರಿ ರಸ್ತೆಯ ಒಂದು ಕಡೆಯಿಂದ ಇನ್ನೊಂದು ಕಡೆ ದಾಟಲು ಮತ್ತು ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ರಸ್ತೆ ದಾಟಬೇಕಾದರೆ ವಂಡರ್ ಲಾ ಮತ್ತು ಹೆಜ್ಜಾಲದಿಂದ ಬರಬೇಕಾಗಿದೆ. ಇವೆರಡರ ಮಧ್ಯೆ ಮೂರು ಕಿ.ಮೀ ಅಂತರವಿದೆ.
ಶೇಷಗಿರಿಹಳ್ಳಿ ಗ್ರಾಮದಲ್ಲಿ ಸರ್ಕಾರಿಪ್ರಾಥಮಿಕ ಶಾಲೆ ಹಾಗೂ ಮಾಧ್ಯಮಿಕ ಮತ್ತು ಪ್ರೌಢಶಾಲೆ ಇದ್ದು, ಸುಮಾರು ೫೦೦ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳು ಶೇಷಗಿರಿಹಳ್ಳಿ ಹಕ್ಕ-ಪಕ್ಕದ ಊರುಗಳಿಂದ ಸರ್ಕಾರಿ ಬಿ.ಎಂಟಿ.ಸಿ ಬಸ್ಸಿನಿಂದ ಬಂದು ರಸ್ತೆಯ ಒಂದು ಕಡೆಯಿಂದ ಇನ್ನೊಂದು ಕಡೆ ದಾಟಲು ಹೆಜ್ಜಾಲ ಮತ್ತು ಮಂಚನಾಯ್ಕನಹಳ್ಳಿಗೆ ಹೋಗಿ ರಸ್ತೆ ದಾಟಬೇಕಾಗುತ್ತದೆ ಎಂದು ದೂರಿದರು.
ಹೆದ್ದಾರಿ ಪಕ್ಕದಲ್ಲೇ ಮುತ್ತರಾಯಸ್ವಾಮಿ ಎಂಬ ಪುರಾಣ ಪ್ರಸಿದ್ಧ ದೇವಸ್ಥಾನವಿದ್ದು, ಇದು ಸುಮಾರು ೫೦೦ ವರ್ಷಗಳ ಇತಿಹಾಸ ಹೊಂದಿದೆ. ಈ ದೇಗುಲಕ್ಕೆ ರಾಜ್ಯದ ಹಲವಾರು ಕಡೆಗಳಿಂದ ಭಕ್ತರು ಪ್ರತಿದಿನ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಕ್ತರು ದೇವಸ್ಥಾನಕ್ಕೆ ಬರಲು ದೂರ ಕ್ರಮಿಸಬೇಕಾಗುತ್ತದೆ. ಟಿಬೈಟ್ ದಲೈಲಾಮಾರವರ ಅಂತರಾಷ್ಟ್ರೀಯ ವಿಶ್ವವಿದ್ಯಾನಲಯದ ವಿದ್ಯಾರ್ಥಿಗಳ ಸಂಚಾರ ಹಾಗೂ ನೂತನ ಬಡಾವಣೆಗಳಲ್ಲಿ ಸಾವಿರಾರು ಮನೆಗಳು ನಿರ್ಮಾಣವಾಗುತ್ತಿವೆ.
ಅವರೆಲ್ಲರ ಸಂಚಾರಕ್ಕೂ ತೊಂದರೆಯಾಗುತ್ತದೆ. ಅಲ್ಲದೆ, ಶೇಷಗಿರಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಜ್ಜಾಲದ ರೈಲ್ವೆ ನಿಲ್ದಾಣಕ್ಕೆ ಹೋಗಲು ಎರಡು ಕಿ.ಮೀ ದೂರ ಸಂಚರಿಸಬೇಕಾಗುತ್ತದೆ. ಆದ್ದರಿಂದ ಮುತ್ತರಾಯಸ್ವಾಮಿ ದೇವಸ್ಥಾನದ ಬಳಿ ಅಂಡರ್ ಪಾಸ್ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದಯ ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್ .ನರಸಿಂಹಯ್ಯ, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ರಾಮನಗರ ಪಿಎಲ್ ಡಿ ಬ್ಯಾಂಕ್ ನರಸಿಂಹಯ್ಯ, ಗ್ರಾಪಂ ಮಾಜಿ ಸದಸ್ಯರಾದ ವೆಂಕಟಪ್ಪ, ಸುನಂದಾ ವೆಂಕಟೇಶ್ , ರಾಧಾಕೃಷ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸತೀಶ್, ವಕೀಲ ನೀಲಕಂಠ, ಮುಖಂಡರಾದ ಶೇಷಪ್ಪ, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.