Saturday, August 13, 2022

Latest Posts

ರಾಮನಗರ: ಚನ್ನಪಟ್ಟಣದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ:ಸಾರ್ವಜನಿಕರ ಆಕ್ರೋಶ

ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸುವ ದುಸ್ಥಿತಿ ಎದುರಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣದಿಂದಾಗಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸುವ ಬೈಕ್, ಸ್ಕೂಟರ್ ಸೇರಿದಂತೆ ಇತರೆ ದೊಡ್ಡವಾಹನಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಿದೆ. ಆದರೆ ಕಳೆದ ಐದಾರು ತಿಂಗಳಿನಿಂದ ಚನ್ನಪಟ್ಟಣ ನಗರದಲ್ಲಿರುವ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪ್ರಮುಖವಾಗಿ ನಗರದ ಶೇರುಹೋಟೆಲ್ ವೃತ್ತ, ಸಾತನೂರು ವೃತ್ತ, ನಗರ ಪೊಲೀಸ್ ಠಾಣೆ ವೃತ್ತ ಹಾಗೂ ಕೋರ್ಟ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಇದ್ದರೂ ಸಹ ಕಾರ್ಯನಿರ್ವಹಿಸದ ಕಾರಣ ವಾಹನ ಸವಾರರು ಅಡ್ಡದಿಡ್ಡಿಯಾಗಿ ಸಂಚರಿಸುತ್ತಿದ್ದಾರೆ. ಇದರಿಂದಾಗಿ ದಿನನಿತ್ಯ ಹತ್ತಾರು ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದೆ. ಇನ್ನು ಶನಿವಾರ-ಭಾನುವಾರ ಬಂದರೆ ಸಾತನೂರು ವೃತ್ತದಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.
ಕನಕಪುರ ಮಾರ್ಗವಾಗಿ ಹೋಗುವವರು, ಪ್ರಸಿದ್ಧ ಶ್ರೀ ಕಬ್ಬಾಳಮ್ಮನ ದೇವಸ್ಥಾನಕ್ಕೆ ಹೋಗುವ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿವೆ. ಟ್ರಾಫಿಕ್ ಸಿಗ್ನಲ್‌ಗಳು ಕಾರ್ಯನಿರ್ವಹಿಸದ ಕಾರಣ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಇನ್ನುಸಂಬಂಧಪಟ್ಟ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನ ಈ ಬಗ್ಗೆ ಪ್ರಶ್ನೆ ಮಾಡಿದರೆ ಆದಷ್ಟು ಬೇಗ ಈ ಸಮಸ್ಯೆಯನ್ನ ಬಗೆಹರಿಸುತ್ತೇವೆಂದು ತಿಳಿಸುತ್ತಾರೆ.
ಕಳೆದ ಐದಾರು ತಿಂಗಳಿನಿಂದ ಇದೇ ಸಮಸ್ಯೆ ಇದ್ದರೂ ಕೂಡ ಯಾವುದೇ ಕ್ರಮವಹಿಸದ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಟ್ರಾಫಿಕ್ ಸಿಗ್ನಲ್‌ಗಳು ಕೆಟ್ಟಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟನೆ ತಡೆಯಲು ಪೊಲೀಸ್ ಸಿಬ್ಬಂದಿಗಳು ಹಾಗೂ ಹೋಮ್ ಗಾರ್ಡ್ಗಳು ಸ್ಥಳದಲ್ಲಿ ಇರುತ್ತಾರೆ. ಆದರೆ ಸರ್ಕಲ್‌ಗಳಲ್ಲಿ ನಾಲ್ಕು ಕಡೆಗಳಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಅಪಘಾತಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇವರು ಸಹ ತಮ್ಮ ಜೀವವನ್ನ ಕೈಯಲ್ಲಿಡು ಕೆಲಸ ಮಾಡುವ ಅನಿವಾರ್ಯತೆ ಇದೇ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಕುರಿತಾಗಿ ಹೋರಾಟ ಮಾಡುವ ಎಚ್ಚರಿಕೆ ನೀಡುವ ಮೂಲಕ ಜನ ಕಿಡಿಕಾರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss