Saturday, June 25, 2022

Latest Posts

ರಾಮನಗರ ಜಿಲ್ಲೆಯಲ್ಲಿ ಕೊರೋನಾದಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆ : ಉಪಮುಖ್ಯಮಂತ್ರಿ ಕಳವಳ

ರಾಮನಗರ : ಜಿಲ್ಲೆಯಲ್ಲಿ ನಿರಂತರವಾಗಿ ಕೋವಿಡ್-೧೯ ನಿಂದ ನಿಧನರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಜನರ ಜೀವ ಉಳಿಸಲು ಎಲ್ಲಾ ರೀತಿಯಿಂದ ಶ್ರಮಿಸುವಂತೆ ಸೂಚಿಸಿದರು. ರಾಮನಗರದ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬೆಂಗಳೂರಿನಿoದ ಮಾತನಾಡಿದ ಉಪ ಮುಖ್ಯಮಂತ್ರಿಗಳು ಕಳೆದ ೧೦ ದಿನಗಳಿಂದ ಜಿಲ್ಲೆಯಲ್ಲಿ ದಿನ ನಿತ್ಯವೂ ಒಂದು ಇಲ್ಲವೆ ಎರಡು ಸಾವು ದಾಖಲಾಗುತ್ತಿದೆ. ಹಿಂದೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ. ೦.೬೦ರಷ್ಟು ಇತ್ತು. ಈಗ ಇದು ಶೇ. ೧.೨೪ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣವನ್ನು ತಗ್ಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಅವರು ತಿಳಿಸಿದರು. ವರದಿ ಸಲ್ಲಿಸಿ: ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮುಂಜಾಗರೂ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಿದ್ದರೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಉಪಮುಖ್ಯಮಂತ್ರಿಗಳು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಾಗಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ರಾಮನಗರ ಜಿಲ್ಲೆಯವರ ಪೈಕಿ ಕೆಲವರು ಬೆಂಗಳೂರಿನಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಇಂತಹವರ ಪೈಕಿ ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯವಾಗಿ ರಾಮನಗರ ಜಿಲ್ಲೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯವರು ಕಳುಹಿಸುತ್ತಿದ್ದಾರೆ. ಹೀಗಾಗಿ, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ತಿಳಿಸಿದರು.
ಸಾವು: ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ೧೧, ಕನಕಪುರ ತಾಲ್ಲೂಕಿನಲ್ಲಿ ೧೧, ಮಾಗಡಿ ತಾಲ್ಲೂಕಿನಲ್ಲಿ ೧೩ ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ ೧೫ ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ೫೦ ಮಂದಿ ನಿಧನರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ಮಾಹಿತಿ ನೀಡಿದರು. ಆಂಬ್ಯುಲೆನ್ಸ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಒಟ್ಟು ೧೬ ಆಂಬ್ಯುಲೆನ್ಸ್ಗಳು ಲಭ್ಯವಿದ್ದು, ಪ್ರತಿ ತಾಲ್ಲೂಕಿಗೂ ತಲಾ ಮೂರು ಆಂಬ್ಯುಲೆನ್ಸ್ಗಳನ್ನು ನೀಡಲಾಗಿದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲೂ ಒಂದೊoದು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ವೈದ್ಯರ ಕೊರತೆ: ಜಿಲ್ಲೆಯಲ್ಲಿ ಇನ್ನೂ ೧೦ ವೈದ್ಯರ ಕೊರತೆ ಇದೆ. ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದ್ದು, ಎಂಬಿಬಿಎಸ್ ಮಾಡಿರುವ ವೈದ್ಯರು ಕೋವಿಡ್ ಕೇರ್‌ನಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಅದೇ ರೀತಿ ೨೦ ನರ್ಸ್ಗಳ ಪೈಕಿ ಆರು ಜನರು ಮಾತ್ರ ಸೇರ್ಪಡೆಯಾಗಿದ್ದಾರೆ. ಇನ್ನೂ ೧೪ ಮಂದಿಯ ಅವಶ್ಯಕತೆ ಇದೆ. ಹಾಗೆಯೇ, ೧೨ ಮಂದಿ ಲ್ಯಾಬ್ ಟೆಕ್ನೀಷಿಯನ್ ಕೊರತೆ ಇರುವುದಾಗಿ ಜಿಲ್ಲಾಧಿಕಾರಿಗಳು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಕೋವಿಡ್ ಪರೀಕ್ಷೆ: ಜಿಲ್ಲೆಯಲ್ಲಿ ಪ್ರತಿ ದಿನವೂ ೯೫೦ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರೋಗ ಲಕ್ಷಣ ಉಳ್ಳವರು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇಡೀ ರಾಜ್ಯದಲ್ಲೇ ನಿಗದಿ ಪಡಿಸಿರುವ ಸಂಖ್ಯೆಗಿoತಲೂ ಅಧಿಕ ಪ್ರಮಾಣದ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಜಿಲ್ಲೆ ಎನ್ನುವ ಹಿರಿಮೆಯನ್ನು ರಾಮನಗರ ಹೊಂದಿದೆ ಎಂದು ಅರ್ಚನಾ ಅವರು ತಿಳಿಸಿದರು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಪೋಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಮತ್ತು ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss