Sunday, August 14, 2022

Latest Posts

ರಾಮನಗರ| ಪ್ರವಾಸಿ ತಾಣವಾಗಿ ಮಂಚನಬೆಲೆ ಅಭಿವೃದ್ಧಿ: ಅಶ್ವತ್ಥ ನಾರಾಯಣ

ರಾಮನಗರ: ಮಂಚನಬೆಲೆ ಜಲಾಶಯವನ್ನು ಪ್ರವಾಸಿಗರ ತಾಣವನ್ನಾಗಿಸುವ ದೃಷ್ಠಿಯಿಂದ ಇಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಇಂದು ತಿಳಿಸಿದರು.
ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿರುವ ಮಂಚನಬೆಲೆ ಜಲಾಶಯವು ತುಂಬಿರುವ ಹಿನ್ನೆಲೆಯಲ್ಲಿ ಇಲ್ಲಿ ಬಾಗಿನ ಸಮರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಮನರಂಜನಾ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಲಾಗುವುದು. ದೋಣಿ ವಿಹಾರ ಸೇರಿದಂತೆ ಹಲವು ಬಗೆಯ ಮನರಂಜನೆಯ ಥೀಮ್ಗಳನ್ನು ಒಳಗೊಂಡಿರುವಂತೆ ಪಾರ್ಕ್ ಅನ್ನು ನಿರ್ಮಿಸಲು ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯ ಮಾಗಡಿಯ ಮಂಚನಬೆಲೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸುವುದರಿಂದ ಎರಡೂ ನಗರಗಳ ಜನತೆಗೆ ವಾರಾಂತ್ಯದಲ್ಲಿ ಉತ್ತಮ ಮನರಂಜನಾ ಪಾರ್ಕ್ ಲಭ್ಯವಾದಂತೆ ಆಗಲಿದೆ. ಅಲ್ಲದೆ, ಇದರಿಂದ ಅನೇಕ ಮಂದಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳಲಿದೆ. ಉತ್ತಮ ರಸ್ತೆಗಳು ಸಹ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು.
ಜಾಗತಿಕ ದರ್ಜೆಗೆ ಅನುಗುಣವಾಗಿ ಈ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ನಿರ್ಮಿಸಲಾಗುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪಾರ್ಕ್ ಅನ್ನು ನಿರ್ಮಿಸುವ ಬಗ್ಗೆ ಅತ್ಯುತ್ತಮ ಸಂಸ್ಥೆಗಳ ಮೂಲಕ ವಿಸ್ತತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು. ಯೋಜನೆಗೆ ಅನುಮೋದನೆ ಪಡೆದುಕೊಂಡ ಬಳಿಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಜನವಸತಿಗೆ ಶುದ್ಧ ನೀರು: ರಾಮನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಿ 250 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಜಿಲ್ಲೆಯಾದ್ಯಂತ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಜಿಲ್ಲೆಯ ಕಣ್ವ, ಮಂಚನಬೆಲೆ, ಇಗ್ಗಲೂರು ಹಾಗೂ ವೈ.ಜಿ ಗುಡ್ಡ ಜಲಾಶಯಗಳಿಗೆ ಕಾವೇರಿ ನದಿಯಿಂದ ನೀರನ್ನು ತುಂಬಿಸಿ ಈ ಜಲಮೂಲಗಳಿಂದ ಜಿಲ್ಲೆಯ ವಸತಿ ಪ್ರದೇಶಗಳಿಗೆ ನೀರು ಒದಗಿಸಲು ರಾಜ್ಯ ಸರ್ಕಾರವು 1800 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಪ್ರಸ್ತಾವನೆಗೆ ಅನುಮೋದನೆ ದೊರೆತ ತಕ್ಷಣ ರಾಜ್ಯ ಸರ್ಕಾರ ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಲಿದೆ ಎಂದರು.
ಎಲ್ಲಾ ತಾಲ್ಲೂಕಿಗೂ ಕುಡಿವ ನೀರು: ಒಟ್ಟು 540 ಕೋಟಿ ರೂ.ಗಳ ವೆಚ್ಚದ ಸತ್ತೇಗಾಲ ಕುಡಿಯುವ ನೀರು ಯೋಜನೆ ಪ್ರಗತಿಯಲ್ಲಿದ್ದು, ಇದರಿಂದ ಮೊಗೇನಹಳ್ಳಿ ಕೆರೆ ಮತ್ತು ಕಣ್ವ ಜಲಾಶಯಕ್ಕೆ ನೀರನ್ನು ತುಂಬಿಸಲಾಗುತ್ತದೆ. ಪುನಃ ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಕೆರೆಗೆ ತಂದು ಅದನ್ನು ನಾಲ್ಕು ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ವಿವರಿಸಿದರು.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ ನೀಡಿ ವಿವಿದ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಅದರಲ್ಲೂ, ಪ್ರಮುಖವಾಗಿ 210 ಕೋಟಿ ರೂ.ಗಳ ವೆಚ್ಚದಲ್ಲಿ ಕೋಡಿಹಳ್ಳಿ ಹಾಗೂ ಇತರೆ 299 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ, 4 ಕೋಟಿ ರೂ.ಗಳ ವೆಚ್ಚದಲ್ಲಿ ಸಾತನೂರು ಹಾಗೂ ಇತರೆ 29 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಹಾಗೂ 2 ಕೋಟಿ ರೂ.ಗಳ ವೆಚ್ಚದಲ್ಲಿ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಶ್ರೀರಂಗ ಏತ ನೀರಾವರಿ: ಮಾಗಡಿ ತಾಲ್ಲೂಕಿನ 211 ಹಳ್ಳಿಗಳಿಗಳಿಗೆ ಕುಡಿಯುವ ನೀರು ಒದಗಿಸಲು ಮತ್ತು ಇಲ್ಲಿನ 66 ಕೆರೆಗಳನ್ನು ಹೇಮಾವತಿ ನದಿಯಿಂದ ಏತ ನೀರಾವರಿ ಮೂಲಕ ತುಂಬಿಸುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡು ಒಂದು ವರ್ಷದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಶ್ವತ್ಥ ನಾರಾಯಣ ಅವರು ನುಡಿದರು.
ಕನಕಪುರ ತಾಲೂಕಿನ ಕೋಡಿಹಳ್ಳಿ ಹಾಗೂ 298 ಜನವಸತಿಗಳಿಗೆ ಕಾವೇರಿ ನದಿಯಿಂದ ಶುದ್ಧ ನೀರನ್ನು ಪೂರೈಸಲು 210 ಕೋಟಿ ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಯೋಜನೆಯ ಪ್ರಗತಿಯು ವಿವಿಧ ಹಂತದಲ್ಲಿದೆ. ಯೋಜನೆಯ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕೆರೆ ಕಾಮಗಾರಿ: ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲ್ಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ 70 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸಲಾಗುವುದು. ಭೂಸ್ವಾಧೀನದ ಸಮಸ್ಯೆ ಪರಿಹರಿಸಿಕೊಂಡು ಕಾಮಗಾರಿಯನ್ನು ಚುರುಕುಗೊಳಿಸಲಾಗುವುದು ಎಂದರು.
110 ಕೋಟಿ ರೂ.ಗಳ ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನ ಕಾಮಗಾರಿ. 70 ಕೋಟಿ ರೂ.ಗಳ ವೆಚ್ಚದಲ್ಲಿ ದೊಡ್ಡಾಲಹಳ್ಳಿ ಮೈಕ್ರೋ ಇರಿಗೇಷನ್ ಕಾಮಗಾರಿ ಹಾಗೂ 252 ಕೋಟಿ ರೂ.ಗಳ ವೆಚ್ಚದಲ್ಲಿ ನಾರಾಯಣಪುರ, ಗರಳಪುರ ಮತ್ತು ಸಾತನೂರು ಏತ ನೀರವಾರಿ ಯೋಜನೆಗಳಿಂದ ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಬಾಗಿನ ಸಮರ್ಪಣೆ: ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸೇರಿದಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು, ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಮತ್ತು ಸಂಸದ ಡಿ.ಕೆ. ಸುರೇಶ್ ಹಾಗೂ ಮಾಗಡಿ ಶಾಸಕ ಎ. ಮಂಜುನಾಥ್ ಸೇರಿದಂತೆ ಇನ್ನಿತರರು ಬಾಗಿನ ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ರಾಮನಗರ ಜಿಲ್ಲಾ ಪಂಚಯಿತಿ ಸಿಇಒ ಇಕ್ರಂ, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss