Wednesday, June 29, 2022

Latest Posts

ರಾಮನಗರ ಸಮೃದ್ಧಿಯ ಜಿಲ್ಲೆ: ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಪರ್ವದಲ್ಲಿ ಮುನ್ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.
ಜಿಲ್ಲೆಯು ವಿವಿಧ ವಲಯಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ, ಮುಖ್ಯಮಂತ್ರಿಗಳ ಆಶಯದಂತೆ ಸದೃಢ ರಾಜ್ಯದ ನಿರ್ಮಾಣದಲ್ಲಿ ನಮ್ಮ ಜಿಲ್ಲೆ ಮಹತ್ವದ ಕೊಡುಗೆ ನೀಡುತ್ತಿರುವುದು ನನ್ನಲ್ಲಿ ಹೆಮ್ಮೆ ಮೂಡಿಸಿದೆ ಎಂದು ಉಪಮುಖ್ಯಮಂತ್ರಿಯಾಗಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸ್ವಾತಂತ್ರ‍್ಯ ದಿನಾಚರಣೆಯಂದು ಧ್ವಜಾರೋಹಣ ನೇರವೇರಿಸಿದ ಬಳಿಕ ಮಾಡಿದ ಭಾಷಣದಲ್ಲಿ ಅವರು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಪರ್ವಗಳ ಸಂಕ್ಷಿಪ್ತ ಮಾಹಿತಿಯನ್ನು ಜಿಲ್ಲೆಯ ಜನತೆಯ ಮುಂದಿಟ್ಟಿದ್ದಾರೆ.
ವೀರಾಪುರ ಮತ್ತು ಬಾನಂದೂರು: 2019-20ನೇ ಸಾಲಿನಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು ತಲಾ 25 ಕೋಟಿ ರೂ.ಗಳಂತೆ ಎರಡು ಗ್ರಾಮಗಳಿಗೆ ನೀಡಿದ್ದ ಒಟ್ಟು 50 ಕೋಟಿ ರೂ.ಗಳ ಅನುದಾನದ ಪೈಕಿ ಬಾನಂದೂರು ಗ್ರಾಮಕ್ಕೆ ಹಾಗೂ ವೀರಾಪುರ ಗ್ರಾಮಕ್ಕೆ ಮೊದಲನೇ ಕಂತಾಗಿ ತಲಾ 14.50 ಕೋಟಿ ರೂ.ಗಳಂತೆ ಒಟ್ಟು 29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಆರೋಗ್ಯ ವಿವಿ: ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರ ಬದ್ಧವಾಗಿದೆ. ಹೊಸದಾಗಿ ರಾಮನಗರದಲ್ಲಿ ಪ್ರಾರಂಭಿಸಲಾಗುವ ಆರೋಗ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವುದರ ಮೂಲಕ ರಾಮನಗರವನ್ನು ’ಆರೋಗ್ಯ ನಗರ’ವಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಲಾಗುತ್ತಿದೆ ಎಂದರು.
ಆರೋಗ್ಯ ಪ್ರವಾಸೋದ್ಯಮ: ರಾಮನಗರ ಜಿಲ್ಲೆಯನ್ನು ಆರೋಗ್ಯ ಪ್ರವಾಸೋದ್ಯಮದ ತಾಣವಾಗಿಸುವ ಗುರಿಯಿಂದ ಇಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುತ್ತಿದೆ. ಹಾಗೆಯೇ, ರಾಜ್ಯದ ಯಾವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇಲ್ಲವೋ ಅಂತಹ ಕಡೆ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಸರ್ಕಾರದ ಕ್ರಮದಿಂದಾಗಿ ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತದೆ ಎಂದು ಭಾಷಣದಲ್ಲಿ ವಿವರಿಸಿದ್ದಾರೆ.
ಸ್ನಾತಕೋತ್ತರ ಕೇಂದ್ರ: ರಾಮನಗರ ಜಿಲ್ಲೆಯಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಕಟ್ಟಡ ಸ್ಥಾಪನೆಗಾಗಿ ರಾಮನಗರ ತಾಲ್ಲೂಕಿನ ಜೀಗೇನಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಜಮೀನನ್ನು ಮೀಸಲಿಡಲಾಗಿದೆ. ಸರ್ಕಾರಕ್ಕೆ ಒಂದು ವರ್ಷ ತುಂಬಿದಾಗ ಕಟ್ಟಡದ ಶಂಕುಸ್ಥಾಪನೆಯನ್ನು ಸಹ ನೆರವೇರಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.
ಮೇಕೆದಾಟು: ಕೇಂದ್ರ ಜಲ ಆಯೋಗ ಈಗಾಗಲೇ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿದೆ. ಹೀಗಾಗಿ ನಮ್ಮ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಸಿದ್ಧವಿದೆ. ಇದಕ್ಕೆ ಸಂಬoಧಿಸಿದoತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಯೋಜನೆಯು ಶೀಘ್ರವೇ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.
ಜಲಾಮೃತ ಯೋಜನೆ: ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 10 ಕೆರೆಗಳನ್ನು ಜಲಾಮೃತ ಯೋಜನೆಯಡಿ ಪುನಃಶ್ಚೇತನಗೊಳಿಸಲು ಆಯ್ಕೆ ಮಾಡಲಾಗಿದೆ. ಯೋಜನೆಯ ಅನುಷ್ಟಾನಕ್ಕೆ 222.73 ಲಕ್ಷ ರೂ.ಗಳು ಹಂಚಿಕೆಯಾಗಿದ್ದು, ಈ ವರೆಗೆ 111.37ಲಕ್ಷ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ ಎಂದು ಅವರು ತಿಳಿಸಿದರು.
ಕುಡಿಯುವ ನೀರು: ರಾಮನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು ಹಲವು ಯೋಜನೆಗಳನ್ನು ಜಿಲ್ಲೆಯಾದ್ಯಂತ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ 3 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಕೇಂದ್ರಕ್ಕೆ ಪ್ರಸ್ತಾವನೆ: ಜಿಲ್ಲೆಯ ಕಣ್ವ, ಮಂಚನಬೆಲೆ, ಇಗ್ಗಲೂರು ಹಾಗೂ ವೈ.ಜಿ ಗುಡ್ಡ ಜಲಾಶಯಗಳಿಗೆ ಕಾವೇರಿ ನದಿಯಿಂದ ನೀರನ್ನು ತುಂಬಿಸಿ ಈ ಜಲಮೂಲಗಳಿಂದ ಜಿಲ್ಲೆಯ ವಸತಿ ಪ್ರದೇಶಗಳಿಗೆ ನೀರು ಒದಗಿಸಲು ರಾಜ್ಯ ಸರ್ಕಾರವು 1800 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಪ್ರಸ್ತಾವನೆಗೆ ಅನುಮೋದನೆ ದೊರೆತ ತಕ್ಷಣ ರಾಜ್ಯ ಸರ್ಕಾರ ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.
ಕಣ್ವ ಮಕ್ಕಳ ಪ್ರಪಂಚ: ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದ ಬಳಿ 10 ಕೋಟಿ ರೂ.ಗಳ ವೆಚ್ಚದಲ್ಲಿ ಕಣ್ವ ಚಿಲ್ಡ್ರನ್ಸ್ ವರ್ಲ್ಡ್ ಸ್ಥಾಪಿಸಲಾಗುತ್ತಿದೆ. ಇಗ್ಗಲೂರು ಡ್ಯಾಂನ ಬಳಿ 2 ಕೋಟಿ ರೂ. ವೆಚ್ಚದಲ್ಲಿ ದೋಣಿ ವಿಹಾರ ಹಾಗೂ ಪ್ರವಾಸಿ ತಾಣದ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ಅವರು ಹೇಳಿದರು.
ಕೋವಿಡ್ ಪರಿಸ್ಥಿತಿ ನಿಭಾಯಿಸಲು ಸಿದ್ಧರಿದ್ದೇವೆ: ಜಿಲ್ಲಾಡಳಿತದ ವತಿಯಿಂದ ಕಂದಾಯ ಭವನವನ್ನೇ ಕೋವಿಡ್ – 19 ರೆಫರಲ್ ಆಸ್ಪತ್ರೆಯನ್ನಾಗಿಸಿ ಕರೋನಾ ಸೋಂಕಿತರಿಗೆ ಇಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ, ಜಿಲ್ಲೆಯಲ್ಲಿ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಜಿಲ್ಲೆಯ ಕರೋನಾ ನಿಯಂತ್ರಣದ ಬಗ್ಗೆ ಜಿಲ್ಲಾಡಳಿತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಜಿಲ್ಲಾ ಆಸ್ಪತ್ರೆಯನ್ನು ಆದಷ್ಟು ಬೇಗನೆ ಸಾರ್ವಜನಿಕರ ಸೇವೆಗೆ ಮುಕ್ತವಾಗಿಸಲಾಗುತ್ತಿದೆ. ಇದರ ಜೊತೆಗೆ, ಈಗ ಕೋವಿಡ್ ಆಸ್ಪತ್ರೆಯಾಗಿರುವ ಕಂದಾಯ ಭವನವನ್ನು ವಿಸ್ತರಿತ 400 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ, ವಿವಿಧ ರೀತಿಯ ವೈದ್ಯಕೀಯ ಸೇವೆಗಳನ್ನು ನೀಡಲಾಗುವುದು ಎಂದು ಉಪಮುಖ್ಯಮಂತ್ರಿಯಾಗಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸ್ವಾತಂತ್ರ‍್ಯ ದಿನಾಚರಣೆಯಂದು ಧ್ವಜಾರೋಹಣ ನೇರವೇರಿಸಿದ ಬಳಿಕ ಮಾಡಿದ ಭಾಷಣದಲ್ಲಿ ಅವರು ಜಿಲ್ಲೆಯ ಜನರ ಆರೋಗ್ಯದ ಹೊಂದಿರುವ ಕಾಳಜಿಯನ್ನು ತೆರೆದಿಟ್ಟರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ ದಿನವೇ ಘೋಷಣೆ ಮಾಡಿದಂತೆ ರಾಮನಗರ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ ಪಾಲಿನ 4 ಸಾವಿರ ರೂ.ಗಳನ್ನು ತಲಾ ಎರಡು ಸಾವಿರ ರೂ.ಗಳಂತೆ ಎರಡು ಕಂತುಗಳಲ್ಲಿ ನೇರವಾಗಿ ಜಿಲ್ಲೆಯಲ್ಲಿರುವ ಒಂದು ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಎಪಿಎoಸಿ ಕಾಯಿದೆ: ರೈತರ ಒಳಿತಿಗಾಗಿ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ’ನನ್ನ ಬೆಳೆ ನನ್ನ ಹಕ್ಕು’ ಎಂಬ ಸಿದ್ದಾಂತವನ್ನು ನಮ್ಮ ಸರ್ಕಾರ ಸಾಕಾರಗೊಳಿಸಿದೆ. ಕರ್ನಾಟಕ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದು 45 ವರ್ಷಗಳ ಬಳಿಕ ನಮ್ಮ ಸರ್ಕಾರ ತಿದ್ದುಪಡಿ ತರುತ್ತಿದೆ. ಇದರಿಂದಾಗಿ ರಾಜ್ಯದಲ್ಲಿನ ಕೃಷಿ ವಲಯದ ವೃದ್ಧಿಗೆ ಹೆಚ್ಚಿನ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಉಪಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು.
ಭೂಸುಧಾರಣೆ ಕಾಯಿದೆ: ಕರ್ನಾಟಕ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತರುತ್ತಿರುವ ರಾಜ್ಯ ಸರ್ಕಾರದ ಈ ಕ್ರಮವು ಎಪಿಎಂಸಿ (ತಿದ್ದುಪಡಿ) ಕಾಯಿದೆಗೆ ಪೂರಕವಾಗಿದೆ. ಇದರಿಂದ ಕೃಷಿ ಕ್ಷೇತ್ರದ ಬೆಳವಣಿಗೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಬಳಕೆಗೆ ಅವಕಾಶ ದೊರೆಯಲಿದೆ. ಉತ್ಪಾದನೆ ಮತ್ತು ಉತ್ಪನ್ನದಲ್ಲಿ ಹೆಚ್ಚಳ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ನಮ್ಮ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಕಾಯಿದೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು ಬಲವಾಗಿ ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ಅರ್ಚನಾ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಇಕ್ರಂ, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಬಿ ಶೆಟ್ಟಿ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss