Tuesday, July 5, 2022

Latest Posts

ರಾಮನಗರ| ಸರ್ಕಾರಿ ಬಾಲಕಿಯರ ಬಾಲಮಂದಿರದಿಂದ 7 ಬಾಲಕಿಯರು ಪರಾರಿ

ರಾಮನಗರ: ಇಲ್ಲಿನ ಸರ್ಕಾರಿ ಬಾಲಕಿಯರ ಬಾಲಮಂದಿರದಿಂದ ಮಂಗಳವಾರ ತಡರಾತ್ರಿ ಎಂಟು ಮಂದಿ ಬಾಲಕಿಯರು ಸಿನಿಮೀಯ ರೀತಿಯಲ್ಲಿ ಪರಾರಿ ಆಗಿದ್ದು, ಅವರಲ್ಲಿ ಒಬ್ಬ ಬಾಲಕಿ ಪತ್ತೆಯಾಗಿದ್ದಾಳೆ.
ರಾತ್ರಿ 11.30ರ ಸುಮಾರಿಗೆ ಒಟ್ಟಾದ ಈ ಎಂಟು ಹುಡುಗಿಯರು ಪರಸ್ಪರ ಸಹಾಯದಿಂದ ಸುಮಾರು 15 ಅಡಿ ಎತ್ತರದ ಪಿವಿಸಿ ಪೈಪ್‌ ಏರಿ ಕಟ್ಟಡದ ಮೇಲ್ಛಾವಣಿ ತೆಗೆದು ಹೊರ ನಡೆದಿದ್ದಾರೆ. ಅಲ್ಲಿಂದ ಪಕ್ಕದ ಕಟ್ಟಡಕ್ಕೆ ಜಿಗಿದು ಪರಾರಿ ಆಗಿದ್ದಾರೆ. ಈ ದೃಶ್ಯವು ಬಾಲಮಂದಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಡುಗಿಯರು ಪರಾರಿ ಆಗುತ್ತಿರುವನ್ನು ಸ್ಥಳೀಯರು ಗಮನಿಸಿ ಮಂದಿರದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಹುಡುಕಾಟ ನಡೆಸಿದಾಗ ಸಮೀಪದ ಗುಡ್ಡದಲ್ಲಿ ಒಬ್ಬಳು ಬಾಲಕಿ ಸಿಕ್ಕಿದ್ದಾಳೆ.
ತಪ್ಪಿಸಿಕೊಂಡಿರುವ ಏಳು ಬಾಲಕಿಯರೂ 11ರಿಂದ 16 ವರ್ಷದ ಒಳಗಿನವರು. ಅದರಲ್ಲೂ 16 ವರ್ಷದ ಒಬ್ಬ ಹುಡುಗಿ ಈ ಹಿಂದೆಯೂ ಹಲವು ಬಾರಿ ತಪ್ಪಿಸಿಕೊಂಡಿದ್ದಳು. ಆಕೆಯೇ ಉಳಿದವರನ್ನೂ ಪುಸಲಾಯಿಸಿ ಕರೆದೊಯ್ದಿದ್ದಾಳೆ ಎಂದು ಬಾಲಮಂದಿರದ ಸಿಬ್ಬಂದಿ ಹೇಳುತ್ತಾರೆ.
ಐಜೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ನಡೆದಿದೆ. ಮಕ್ಕಳ ಪೋಷಕರು, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗುತ್ತಿದೆ. ತಿಂಗಳ ಹಿಂದಷ್ಟೇ ಇದೇ ಬಾಲಮಂದಿರದಿಂದ ಇಬ್ಬರು ನಾಪತ್ತೆಯಾಗಿದ್ದು, ಮೂರು ದಿನದ ಬಳಿಕ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಾಲಮಂದಿರವನ್ನು ವಂದಾರಗುಪ್ಪೆಯಲ್ಲಿನ ಖಾಸಗಿ ಕಟ್ಟಡದಿಂದ ಐಜೂರಿನ ಮಲ್ಲೇಶ್ವರ ಬಡಾವಣೆಯ ಹಳೆಯ ಖಾಸಗಿ ಕಲ್ಯಾಣಮಂಟಪವೊಂದಕ್ಕೆ ವಾರದ ಹಿಂದಷ್ಟೇ ಸ್ಥಳಾಂತರ ಮಾಡಲಾಗಿತ್ತು.
‘ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಕ್ಕಳಿಗಾಗಿ ಹುಡುಕಾಟ ನಡೆದಿದೆ. ಮುಂದೆ ಹೀಗಾಗದಂತೆ ಬಾಲಮಂದಿರದ ಎಲ್ಲ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಲಾಗುವುದು’ ಎಂದು ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಹೊಸ ದಿಗಂತಗೆ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss