Monday, July 4, 2022

Latest Posts

ರಾಮಮಂದಿರ ನಿರ್ಮಾಣ ಸಾಕಾರದ ವಿಜಯದಶಮಿ: ಆರೆಸ್ಸೆಸ್ ವಿಭಾಗ ಸಹ ಪ್ರಚಾರಕ ನವೀನ್ ಸುಬ್ರಹ್ಮಣ್ಯ ಸಂತಸ

ದಾವಣಗೆರೆ: ರಾಮಮಂದಿರ ನಿರ್ಮಾಣ ಶುಭ ಸಂದರ್ಭದಲ್ಲಿ ಆಚರಿಸಲ್ಪಡುತ್ತಿರುವ ಈ ಬಾರಿಯ ವಿಜಯ ದಶಮಿ ಹಬ್ಬವು ನಿಜಾರ್ಥದಲ್ಲಿ ವಿಜಯದ ಸಂಕೇತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿವಮೊಗ್ಗ ವಿಭಾಗದ ಸಹ ಪ್ರಚಾರಕ ನವೀನ್ ಸುಬ್ರಹ್ಮಣ್ಯ ಹರ್ಷ ವ್ಯಕ್ತಪಡಿಸಿದರು.
ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಸಂಜೆ ವಿಶ್ವ ಹಿಂದೂ ಪರಿಷದ್, ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 36ನೇ ವರ್ಷದ ಸಾರ್ವಜನಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಬಾರಿಯ ವಿಜಯದಶಮಿ ಪ್ರತಿಯೊಬ್ಬ ಹಿಂದೂ ಕೂಡ ಸಂಭ್ರಮ ಪಡುವ ಹಬ್ಬವಾಗಿದೆ. ಈಗಾಗಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪುನರ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಹಿಂದೂಗಳ ಸ್ವಾಭಿಮಾನ ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಹೀಗಾಗಿ ಈ ಬಾರಿಯ ವಿಜಯ ದಶಮಿಯು ಭಾರತೀಯರಿಗೆ ಜಯವನ್ನು ತಂದುಕೊಟ್ಟಿದ್ದು, ಮನೆ-ಮನೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ನವದುರ್ಗಿಯರನ್ನು ಆರಾಧಿಸುವ ಮೂಲಕ ನಮ್ಮಲ್ಲಿರುವ ಅರಿಷಡ್ವರ್ಗಗಳ ನಾಶಕ್ಕೆ ಮುಂದಾಗೋಣ. ಸನಾತನ ಧರ್ಮವಾದ ಹಿಂದೂ ಸಂಸ್ಕೃತಿಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಒಂದು ಗಂಟೆಯಾದರೂ ಮೀಸಲಿಟ್ಟು, ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರ ಕೊಡುವ ಸಂಕಲ್ಪ ಮಾಡೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಪೇಟ ತೊಟ್ಟಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಾಳೆ ಕಂಬಕ್ಕೆ ಪೂಜೆ ಸಲ್ಲಿಸಿದ ನಂತರ ಖಡ್ಗದಿಂದ ಅಂಬು ಛೇದನ ನೆರವೇರಿಸಿದರು. ತದನಂತರ ಗಣ್ಯರು, ಸಾರ್ವಜನಿಕರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬದುಕು ಬಂಗಾರವಾಗಲಿ ಎಂಬುದಾಗಿ ಶುಭ ಕೋರಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯ ಕುಮಾರ್, ಉತ್ಸವ ಸಮಿತಿ ಸಂಚಾಲಕ ಸಿ.ಎಸ್.ರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss