ಉಡುಪಿ: ಇನ್ನೇನು ನಾಲ್ಕು ದಿನಗಳು ಕಳೆದರೆ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಕೋಟ್ಯಂತರ ಭಕ್ತರು ಹೆಬ್ಬಯಕೆಯಾದ ರಾಮ ಮಂದಿರ ನಿರ್ಮಾಣಕ್ಕೆ ಅಧಿಕೃತ ಭೂಮಿ ಪೂಜೆ ನಡೆಯುತ್ತದೆ. ಭಾರತೀಯರ ‘ಭಾವಸೇತು’ ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ತಾವು ಕೈಜೋಡಿಸಬೇಕೆಂಬ ತುಡಿತ ಹೊಂದಿದ್ದಾರೆ. ರಾಮ ಭಕ್ತರಿಗೆ ತಮ್ಮ ಬಯಕೆ ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ 300 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈ ಮೊತ್ತವನ್ನು ರಾಮಭಕ್ತರಿಂದಲೇ ಸಂಗ್ರಹಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಅದಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯಾ ನಗರದ ನಯಾ ಘಾಟ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಟ್ರಸ್ಟ್ ಎರಡು ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಭಕ್ತರು ನಗದು ಠೇವಣಿಯನ್ನು ಚಾಲ್ತಿ ಖಾತೆ ಸಂಖ್ಯೆ: 39161498809 ಹಾಗೂ ಚೆಕ್ ಠೇವಣಿ / ಆನ್ಲೈನ್ ವರ್ಗಾವಣೆಯನ್ನು ಉಳಿತಾಯ ಖಾತೆ ಸಂಖ್ಯೆ: 39161495808 ಇಲ್ಲಿಗೆ ಜಮೆ ಮಾಡಬಹುದು. ಇದರ ಐಎಫ್ಎಸ್ಸಿ ಕೋಡ್: ಎಸ್ಬಿಐಎನ್ 0002510 ಆಗಿದೆ.
ಆದಾಯ ತೆರಿಗೆಯಲ್ಲಿ ಶೇ. 50 ವಿನಾಯಿತಿ: ರಾಮ ಮಂದಿರಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಜಿ (2)(ಬಿ) ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ದೇಣಿಗೆ ಪಾವತಿಸಿದರೆ 2020-21ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆಯಿಂದ ಶೇ. 50 ವಿನಾಯಿತಿ ಲಭಿಸುತ್ತದೆ.
ತಲೆಗೆ 10 ರೂ., ಮನೆಗೆ 101 ರೂ.: ಇತ್ತೀಚೆಗೆ ನಡೆದ ತೀರ್ಥ ಕ್ಷೇತ್ರ ಟ್ರಸ್ಟ್ನ ಸಭೆಯಲ್ಲಿ ಪ್ರತಿಯೊಬ್ಬ ಭಕ್ತನೂ ಕನಿಷ್ಠ 10 ರೂ. ಹಾಗೂ ಮನೆಯಿಂದ 101 ರೂ. ನೀಡಬೇಕು ಎಂದು ಮನವಿ ಮಾಡಲಾಗಿದೆ. ಆದರೆ ಭಕ್ತರು ಶಕ್ತ್ಯಾನುಸಾರ ಇದಕ್ಕೂ ಹೆಚ್ಚಿನ ಮೊತ್ತವನ್ನು ನೀಡಬಹುದಾಗಿದೆ. ಭಕ್ತರು ನೀಡುವ ಒಂದೊಂದು ರೂಪಾಯಿ ಕೂಡ ರಾಮಮಂದಿರ ನಿರ್ಮಾಣಕ್ಕೆ ಬಳಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಟ್ರಸ್ಟ್ ದೇಣಿಗೆಯನ್ನು ಆನ್ಲೈನ್ ಮೂಲಕವೇ ಸಂಗ್ರಹಿಸಲು ನಿರ್ಧರಿಸಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಟ್ರಸ್ಟ್ನ ಅಧಿಕೃತ ವೆಬ್ಸೈಟ್ https://srjbtkshetra.org/ ಇಲ್ಲಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಟ್ರಸ್ಟ್ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.