ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುತ್ತಿರುವ ಅಂಗವಾಗಿ ಶ್ರೀ ರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿಯಿಂದ ಆಗಸ್ಟ್ 5ರಂದು ಪಟ್ಟಣದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಹೇಳಿದರು.
ಸೊರಬ ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಸಂಖ್ಯಾತ ಹಿಂದೂಗಳ ಬಹು ನಿರೀಕ್ಷಿತ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಅಯೋಧ್ಯಾ ನಗರದ ಸರಯೂ ನದಿಯ ತೀರದಲ್ಲಿ ಅಂದು ಪ್ರಧಾನಿ ಮೋದಿ ನೆರವೇರಿಸುತ್ತಿದ್ದು, ಈ ಸಂದರ್ಭದಲ್ಲಿ ಪಟ್ಟಣದ ಶ್ರೀ ಸೀತಾರಾಮ ಚಂದ್ರ ದೇವಸ್ಥಾನದಲ್ಲಿ ಬೆಳಗ್ಗೆ 6ಕ್ಕೆ ಶ್ರೀ ರಾಮತಾರಕ ಹೋಮ, ವಿಶೇಷ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಅವರ ನೇತೃತ್ವದಲ್ಲಿ ಜರುಗಲಿವೆ. ಜೊತೆಗೆ ಕರ ಸೇವಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.
ಜನತೆ ಅಂದು ಮನೆಯಲ್ಲಿ ಬೆಳಗ್ಗೆ 7ರಿಂದ 8ರವರೆಗೆ ದೀಪ ಬೆಳಗಿಸಿ ಶ್ರೀ ರಾಮತಾರಕ ಮಂತ್ರ ಜಪಿಸಿಸುವುದು, ಹನುಮಾನ್ ಚಾಲೀಸ್ ಪಠಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶುಭಕೋರುವುದು ಹಾಗೂ ಮನೆಯ ಮುಂಭಾಗದಲ್ಲಿ ಭಗವಧ್ವಜ ಹಾರಿಸಬೇಕೆಂದು ವಿನಂತಿಸಿದ ಅವರು, ಉತ್ಸವ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷದ್, ಭಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ, ಯುವಾ ಬ್ರಿಗೇಡ್ ಸೇರಿದಂತೆ ವಿವಿಧ ಸಮಾಜದವರು ಮತ್ತು ಪಟ್ಟಣದ ದೇವಸ್ಥಾನಗಳ ಪದಾಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಕೋವಿಡ್-19 ಸರ್ಕಾರಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿ, ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆಶಿಕ್ ನಾಗಪ್ಪ, ಸಂಚಾಲಕ ಮಹೇಶ್ ಖಾರ್ವಿ, ಸಹ ಸಂಚಾಲಕರಾದ ನಟರಾಜ ಉಪ್ಪಿನ, ಸಂಜೀವ್ ಆಚಾರ್, ಭಜರಂಗದಳದ ಜಿಲ್ಲಾ ಸಹ ಸಂಚಾಲಕ ರವಿ ಜೆ. ಗುಡಿಗಾರ್, ಯುವಾ ಬ್ರಿಗೇಡ್ನ ಮಂಜು ಇದ್ದರು.