ಹುಬ್ಬಳ್ಳಿ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಈ ವಿಷಯದಲ್ಲಿ ಕಾಂಗ್ರೆಸ್ನಲ್ಲಿ ಈಗಲೂ ಗೊಂದಲವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೇವಲ ಮತಗಳಿಕೆ ಕುರಿತು ಕಾಂಗ್ರೆಸ್ ಯೋಚಿಸುತ್ತಿದೆ. ಮತ ಕಳೆದುಕೊಳ್ಳುತ್ತೇವೆ ಎಂಬ ಭಯದಿಂದ ಗೊಂದಲಕ್ಕೆ ಸಿಲುಕಿಕೊಂಡಿದೆ. ರಾಮಮಂದಿರ ಹೋರಾಟದ ಪರವಿದ್ದರೆ ಅಲ್ಪ ಸಂಖ್ಯಾತರ ಮತಗಳು ಕಳೆದು ಹೋಗುವ ಭಯ ಹಾಗೂ ಅಲ್ಪಸಂಖ್ಯಾತರ ಪರವಿದ್ದರೆ ಹಿಂದೂಗಳ ಮತಗಳು ಕಳೆದುಹೋಗುವ ಭಯದಲ್ಲಿದೆ ಎಂದರು.
ದೇಶದಲ್ಲಿ ಎಲ್ಲವೂ ಸರಿಯಾಗಿರುವುದನ್ನು ಸಹಿಸಿಕೊಳ್ಳಲು ಕೆಲವರಿಂದ ಆಗುತ್ತಿಲ್ಲ. ಬಿಜೆಪಿ ಶಾಂತಿ ಸೌಹಾರ್ದತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಅದರ ಫಲವಾಗಿ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಮೇಲೂ ಶಾಂತಿ ನೆಲೆಸಿದೆ ಎಂದರು.
ಮಹದಾಯಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಹಣ ಮೀಸಲಿಟ್ಟಿದೆ. ಇದಕ್ಕೂ ಮೊದಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದ್ದು, ರಾಜ್ಯ ಈ ಕುರಿತು ಕೇಂದ್ರಕ್ಕೆ ವಿವರವಾದ ಪ್ರಸ್ತಾವ ಸಲ್ಲಿಸಬೇಕು. ಪ್ರಸ್ತಾವ ಸಲ್ಲಿಸಿದ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ತಮ್ಮ ಅವಧಿ ಪೂರ್ಣಗೊಳಿಸುತ್ತಾರೆ. ಯಾವುದೇ ಅನುಮಾನ ಬೇಡ ಎಂದರು.