Wednesday, August 10, 2022

Latest Posts

ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ: ಆಗಸ್ಟ್ 5ರಂದು ಮನೆಮನೆಗಳಲ್ಲಿ ವಿಶೇಷ ಪೂಜೆಗೆ ವಿಹಿಂಪ ಕರೆ

ಮಡಿಕೇರಿ: ಅಯೋಧ್ಯೆಯ ಶ್ರೀರಾಮನ ಜನ್ಮ ಸ್ಥಳದಲ್ಲಿ ಭವ್ಯ ಮಂದಿರದ ಪುನರುತ್ಥಾನಕ್ಕೆ ಆ.5ರ ಬೆಳಗ್ಗೆ 10.30ಗಂಟೆಗೆ ಭೂಮಿ ಪೂಜೆ ನೆರವೇರಲಿದ್ದು, ಈ ಸಂದರ್ಭ ಕೊಡಗಿನ ಎಲ್ಲಾ ದೇವಾಲಯಗಳು ಹಾಗೂ ಮನೆಮನೆಗಳಲ್ಲೂ ವಿಶೇಷ ಪೂಜೆ ಸಲ್ಲಿಸಬೇಕೆಂದು ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಕರೆ ನೀಡಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು, ಸಾಧು ಸಂತರು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಶ್ರೀರಾಮನ ಭವ್ಯ ಮಂದಿರ ನಿರ್ಮಾಣದೊಂದಿಗೆ ಭಾರತದ ಸಾಮಾಜಿಕ ಸಮರಸತೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ವಿಶ್ವ ಕಲ್ಯಾಣದ ಆಶಯದೊಂದಿಗೆ ಈ ಕಾರ್ಯಕ್ರಮ ನೆರವೇರಲಿದೆ ಎಂದು ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ವಿಧಿವತ್ತಾಗಿ ಶುಭ ಮುಹೂರ್ತದಲ್ಲಿ ಚಾಲನೆ ನೀಡಲಿದೆ. ಈ ಕಾಲಘಟ್ಟದಲ್ಲಿ ದೇಶದೆಲ್ಲೆಡೆ ಮಠಮಂದಿರಗಳು, ಆಶ್ರಮಗಳು, ದೇವನೆಲೆಗಳಲ್ಲಿ, ಮನೆಮನೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ ಭಜನೆ, ಪೂಜೆ, ದೀಪಾರಾಧನೆಯೊಂದಿಗೆ ಶ್ರೀರಾಮನ ಆರಾಧನೆಗೆ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಕರೆ ನೀಡುತ್ತಿದೆ. ಅಂತೆಯೇ ಈ ಶುಭದಿನದಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮತ್ತು ಪೂಜ್ಯ ಶಂಕರಲಿಂಗ ಸ್ವಾಮಿಗಳ ಜಯಂತಿ ಇದ್ದು ಶ್ರಾವಣ ಮಾಸದ ಈ ಪರ್ವದಲ್ಲಿ ಕೊಡಗಿನ ಎಲ್ಲಾ ದೇವಾಲಯಗಳು ಹಾಗೂ ಮನೆಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರೀ ರಾಮನ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ವಿ. ಹಿಂ. ಪ ಜಿಲ್ಲಾಧ್ಯಕ್ಷ ಎಂ.ಎಂ.ಬೋಪಯ್ಯ, ಕಾರ್ಯದರ್ಶಿ ಡಿ.ನರಸಿಂಹ, ಕೊಡಗು ವಿ.ಹಿಂ.ಪ.ದ ಮಠ ಮಂದಿರ ಪ್ರಮುಖರಾದ ಚಿ. ನಾ. ಸೋಮೇಶ್ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಕೆ.ಹೆಚ್.ಚೇತನ್ ಕರೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss