Tuesday, June 28, 2022

Latest Posts

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದಿಂದ ನಿಧಿ ಸಂಗ್ರಹಣಾ ಅಭಿಯಾನ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದ ಮೂಲಕ ಇಡೀ ದೇಶ ಒಗ್ಗೂಡಬೇಕು ಎನ್ನುವ ಉದ್ದೇಶದಿಂದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಸಾರ್ವಜನಿಕರಿಂದ ನಿಧಿ ಸಂಗ್ರಹಣಾ ಅಭಿಯಾನ ಆರಂಭಿಸಿದೆ.
ನವೆಂಬರ್ 27 ರಿಂದ ನಿಧಿ ಸಮರ್ಪಣಾ ಅಭಿಯಾನ ಆರಂಭಗೊಂಡಿದ್ದು, ಫೆಬ್ರವರಿ 5 ರೊಳಗೆ ಅದು ಮುಕ್ತಾಯಗೊಳ್ಳಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಈ ಅಭಿಯಾನದ ಪಾಲಕ ಶಕ್ತಿಯಾಗಿ ಕೆಲಸ ಮಾಡಲಿದ್ದು, ಅದರೊಂದಿಗೆ ಸಂಘ ಪರಿವಾರದ ಎಲ್ಲ ಸಂಘಟನೆಗಳು ಪಾಲ್ಗೊಳ್ಳಲಿವೆ.
ಈ ಸಂಬಂಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕರ್ನಾಟಕ ಕಾರ್ಯವಾಹ ಪಟ್ಟಾಭಿರಾಮ್ ಮತ್ತು ವಿಭಾಗ ಕಾರ್ಯವಾಹ ನರೇಂದ್ರ ಅವರ ನೇತೃತ್ವದಲ್ಲಿ ನಗರದಲ್ಲಿ ಸಭೆಯೊಂದನ್ನು ನಡೆಸಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗಿದೆ.
ಒಟ್ಟು 1500 ಕೋಟಿ ರೂ. ವೆಚ್ಚದಲ್ಲಿ ರಾಮ ಮಂದಿರ ಸೇರಿದಂತೆ ಅದಕ್ಕೆ ಹೊಂದಿಕೊಂಡಂತೆ ಇನ್ನಿತರೆ ಕಾಮಗಾರಿಗಳು ನಡೆಯಲಿದೆ. ಇಷ್ಟು ಪ್ರಮಾಣದ ಹಣವನ್ನು ಕೈಗಾರಿಕೋದ್ಯಮಿಗಳು, ಕಾಪೋರೇಟ್ ಕಂಪನಿಗಳಿಂದ ಸಂಗ್ರಹಿಸುವುದು ದೊಡ್ಡ ವಿಚಾರವಲ್ಲ. ಈಗಾಗಲೇ ಅಂತಹ ಸಂಸ್ಥೆಗಳು ದೊಡ್ಡ ಮೊತ್ತದ ದೇಣಿಗೆ ನೀಡಲು ಮುಂದಾಗಿವೆಯಾದರೂ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಾಮಾನ್ಯ ಜನರ ಕೊಡುಗೆಯೂ ಇರಬೇಕು. ಮಂದಿರ ನಿರ್ಮಾಣಕ್ಕೆ ನಮ್ಮ ಕೊಡುಗೆಯೂ ಇದೆ ಎನ್ನುವ ತೃಪ್ತಿ, ಹೆಗ್ಗಳಿಕೆಯೊಂದಿಗೆ ಮಂದಿರ ನಿರ್ಮಾಣದಲ್ಲಿ ಎಲ್ಲರೂ ಭಾಗವಹಿಸಬೇಕು. ಆ ಮೂಲಕ ಇಡೀ ದೇಶ ಒಟ್ಟುಗೂಡಬೇಕು. ಸಮಗ್ರ ಭಾರತ ಈ ಕಾರ್ಯದಲ್ಲಿ ಭಾಗವಹಿಸುವಂತಾಗಬೇಕು ಎನ್ನುವ ಉದ್ದೇಶದಿಂದ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ನ್ಯಾಸವು ಈ ಅಭಿಯಾನವನ್ನು ಆರಂಭಿಸಿದೆ.
ಜನಸಾಮಾನ್ಯರಿಂದ 10 ರೂ.ನಿಂದ ಹಿಡಿದು 2,000ರೂ. ಅದಕ್ಕಿಂತ ಹೆಚ್ಚಿನ ನಿಧಿಯನ್ನು ಸಂಗ್ರಹಿಸಲು ತೀರ್ಮಾನಿಸಲಾಗಿದೆ. 10 ರಿಂದ 2,000 ರೂ.ವರೆಗಿನ ದೇಣಿಗೆಗೆ ಕೂಪನ್‍ಗಳನ್ನು ನೀಡಲಾಗುವುದು. 2,000ರೂ. ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವವರಿಗೆ ರಸೀತಿ ನೀಡಲಾಗುವುದು. ನೆಫ್ಟ್, ಆರ್‍ಟಿಜಿಎಸ್ ಸೇರಿದಂತೆ ಎಲ್ಲ ರೀತಿಯ ಆನ್‍ಲೈನ್ ದೇಣಿಗೆಗಳಿಗೆ ಆನ್‍ಲೈನ್ ಮುಖಾಂತರವೇ ರಸೀತಿ ದೊರೆಯಲಿದೆ.
ಒಟ್ಟಾರೆ ಈ ಅಭಿಯಾನದಲ್ಲಿ ಎಲ್ಲವೂ ಕಾನೂನು ರೀತಿ, ವಿಧಿ ಬದ್ಧವಾಗಿ ನಿಧಿ ಸಂಗ್ರಹಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಒಟ್ಟು 67.23 ಎಕರೆ ಜಾಗದಲ್ಲಿ 2.77 ಎಕರೆ ಪ್ರದೇಶದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಲಿದೆ. ಇನ್ನುಳಿದ ಜಾಗದಲ್ಲಿ ಲಕ್ಷಾಂತರ ಜನ ಉಳಿಸಲು ವ್ಯವಸ್ಥೆ ಕಲ್ಪಿಸುವುದು, ದೊಡ್ಡದಾದ ಸಭಾಂಗಣ ನಿರ್ಮಾಣ, ಗೋಶಾಲೆ, ಗ್ರಂಥಾಲಯ, ಅಧ್ಯಯನ ಕೇಂದ್ರಗಳು ನಿರ್ಮಾಣಗೊಳ್ಳಲಿವೆ. 3 ಅಂತಸ್ತಿನ ಮಂದಿರಕ್ಕೆ 400 ಕೋಟಿ ರೂ. ವೆಚ್ಚವಾಗಲಿದೆ. ಇನ್ನುಳಿದ 1100 ಕೋಟಿ ರೂ.ಗಳನ್ನು ಉಳಿದ ಕಾರ್ಯಗಳಿಗೆ ಬಳಸಲಾಗುವುದು.
ಇದಕ್ಕಾಗಿ ನಿಧಿ ಸಂಗ್ರಹಿಸಲು ದೇಶದ ಪ್ರತಿಯೊಬ್ಬ ಹಿಂದುಗಳ ಮನೆಯನ್ನು ಸಂಪರ್ಕಿಸಿ ಅವರ ಶಕ್ತಿಯ ಅನುಸಾರ ನಿಧಿ ಸಂಗ್ರಹಿಸಲಾಗುವುದು. ಬೇರೆ ಧರ್ಮದವರು ದೇಣಿಗೆ ನೀಡಲು ಮುಂದಾದಲ್ಲಿ ಅದನ್ನು ಸಹ ಸ್ವೀಕರಿಸಲು ತೀರ್ಮಾನಿಸಲಾಗಿದೆ.
ಈ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಒಟ್ಟು ಎರಡೂವರೆ ತಿಂಗಳ ಕಾಲ ಪೂರ್ಣಾವಧಿಗೆ ವಿಸ್ತಾರಕರಾಗಿ ಸಮಯ ಕೊಡಲು ಅವಕಾಶವಿದೆ. ಸಾಧ್ಯವಾಗದಿದ್ದಲ್ಲಿ, 1 ತಿಂಗಳು, 15 ದಿನ ಅಥವಾ ಕನಿಷ್ಠ 10 ದಿನಗಳ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ.
ನಿಧಿ ಸಮರ್ಪಣಾ ಅಭಿಯಾನ ಪೂರ್ಣಗೊಂಡ ನಂತರ ಫೆಬ್ರವರಿ 5 ರಿಂದ 15ರೊಳಗಾಗಿ ಸಂಗ್ರಹಿಸಲ್ಪಟ್ಟ ನಿಧಿಗೆ ಸಂಬಂಧಿಸಿದ ಪೂರ್ಣ ಲೆಕ್ಕವನ್ನು ದೇಶದ ಮುಂದೆ ಇಡಲಾಗುತ್ತದೆ. ಆಸಕ್ತ ಮಹಿಳೆಯರು ಸಹ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ.
ಓರ್ವ ಕಾರ್ಯಕರ್ತ ಕನಿಷ್ಠ 10 ಮನೆಗಳನ್ನು ಸಂಪರ್ಕಿಸಬೇಕಾಗುತ್ತದೆ. ಈ ವೇಳೆ ನಿಧಿ ಸಂಗ್ರಹದ ಉದ್ದೇಶವನ್ನು ಮನವರಿಕೆ ಮಾಡಬೇಕಾಗುತ್ತದೆ, ಬಲವಂತವಾಗಿ ಯಾರಿಂದಲೂ ಹಣ ಸಂಗ್ರಹಿಸಲು ಅವಕಾಶವಿರುವುದಿಲ್ಲ.
ಸಂಘ ಪರಿವಾರದ ವ್ಯಾಪ್ತಿಯಲ್ಲಿ ಬರುವ ಎಲ್ಲರೂ ಇದರಲ್ಲಿ ಭಾಗವಹಿಸಬೇಕಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರಿಂದ ಹಿಡಿದು ಕೊನೆ ಹಂತದ ಕಾರ್ಯಕರ್ತರವರೆಗೂ ಹಾಗೂ ಪ್ರಧಾನ ಮಂತ್ರಿಗಳಿಂದ ಹಿಡಿದು ಸಂಘ ಪರಿವಾರದ ಕೊನೆಯ ಕಾರ್ಯಕರ್ತರವರೆಗೂ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss