Thursday, June 30, 2022

Latest Posts

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ 10 ರೂ.ಗಳಿಂದಲೂ ನಿಧಿ ಸಮರ್ಪಣೆಗೆ ಅವಕಾಶ

ಹೊಸದಿಗಂತ ವರದಿ, ಚಿತ್ರದುರ್ಗ:

ಅಯೋಧ್ಯೆಯಲ್ಲಿರುವ ಶ್ರೀರಾಮಚಂದ್ರನಿಗೂ, ದೇಶದೆಲ್ಲೆಡೆ ಇರುವ ಆತನ ಭಕ್ತರಿಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಿಧಿ
ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ
ಕೇಶವ ಹೆಗಡೆ ತಿಳಿಸಿದರು.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಗರದ ಕಬೀರಾನಂದಾಶಮ್ರದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಬಡವ, ಬಲ್ಲಿದ ಸೇರಿದಂತೆ ಎಲ್ಲರೂ ಭಾಗೀಯಾಗಬೇಕು. ಹಾಗಾಗಿ ಕನಿಷ್ಠ 10 ರೂ.ಗಳಿಂದಲೂ ನಿಧಿ ಸಮರ್ಪಣೆಗೆ ಅವಕಾಶ ನೀಡಲಾಗಿದೆ ಎಂದರು.
ಸರ್ಕಾರದ ಹಣ ಬಳಸದೆ, ಹಣವಂತರಿಂದ ದೇಣಿಗೆ ಪಡೆಯದೆ ಮಂದಿರ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ದೇಶದ ಸಾಮಾನ್ಯ ರಾಮ ಭಕ್ತನೂ ಸಹ ನಾನು ಕೂಡಾ 10 ರೂ. ಕೊಟ್ಟಿದ್ದೇನೆ ಎಂದು ಈ ಹೇಳುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಅಭಿಯಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೆಚ್ಚು ಜನರನ್ನು ತಲುಪಬೇಕು ಎಂದು ತಿಳಿಸಿದರು.
ದೇಶದಲ್ಲಿ ಶತಕೋಟಿ ಹಿಂದುಗಳಿದ್ದಾರೆ. ಅಯೋಧ್ಯೆಯಲ್ಲಿ ಎಲ್ಲರೂ ಭಾಗಿಯಾಗುವಂತಹ ಸೌಹಾಧ ಮಂದಿರ ಕಟ್ಟಬೇಕು ಎನ್ನುವವರಿದ್ದಾರೆ. ಆದರೆ, ರಾಮನ ಭವ್ಯ ಇತಿಹಾಸ ಇರುವುದು ಅಯೋಧ್ಯೆಯಲ್ಲಿ ಎನ್ನುವುದು ಈ ದೇಶದ ಎಲ್ಲರಿಗೂ ಗೊತ್ತು. ಈ ಕಾರಣಕ್ಕೆ ವಿರೋಧವನ್ನು ಲೆಕ್ಕಿಸದೆ ಹೋರಾಟ ನಡೆಸಿ, ಈಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಒಟ್ಟಾರೆ ದೇಶದಲ್ಲಿ 43 ದಿನ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ. ಜನವರಿ 15 ರಿಂದ ಫೆಬ್ರವರಿ 5ರವರೆಗೆ ರಾಜ್ಯದಲ್ಲಿ 23 ದಿನಗಳ ಕಾಲ ನಡೆಯಲಿದೆ. ಈ ಅಭಿಯಾನ ಹಿಂದೂ ಸಮಾಜದ ಸಂಘಟನೆ, ಜಾಗೃತಿ ಮಾಡುವ ಕೆಲಸವಾಗಿದೆ. ಜಾಗೃತ ಹಿಂದೂ ಶಕ್ತಿಯನ್ನು ಬಡಿದೆಬ್ಬಿಸುವ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಭಿಯಾನದ ಜಿಲ್ಲಾ ಪ್ರಮುಖರಾದ ರಾಜಕುಮಾರ್, ಬಜರಂಗದಳ ವಿಭಾಗ ಸಂಚಾಲಕ ಪ್ರಭಂಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರಕ ಮಂಜುನಾಥ್, ನಗರ ಕಾರ್ಯವಾಹ ವಿಶ್ವನಾಥ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ರಂಗಸ್ವಾಮಿ, ಓಂಕಾರ್, ಶ್ರೀನಿವಾಸ, ವಿಠಲ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss