ರಾಯಚೂರು: ಜಿಲ್ಲೆ ಹಿಂದುಳಿದ ಪ್ರದೇಶವಾಗಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಅನುಕೂಲವಾಗುವಂತೆ ಐಐಐಟಿ ಸ್ಥಾಪಿಸಿ, ಅದನ್ನು ಜ್ಞಾನ ಕೇಂದ್ರವನ್ನಾಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದರು.
ನಗರದ ಹೊರವಲಯದಲ್ಲಿರುವ ಬಾಯಿದೊಡ್ಡಿ ಪ್ರದೇಶದಲ್ಲಿ ಐಐಐಟಿ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರಸ್ತುತ ರಾಯಚೂರು ಐಐಐಟಿ ಕಾಲೇಜನ್ನು ಹೈದ್ರಾಬಾದ್ನಲ್ಲಿ ಪ್ರಾರಂಭಿಸಲಾಗಿದ್ದು, ಅದನ್ನು ಈ ವರ್ಷವೇ ರಾಯಚೂರಿನ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ 2.50 ಕೋಟಿ ವೆಚ್ಚದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಅದರ ಜೊತೆಯಲ್ಲಿ ಐಐಐಟಿ ಪ್ರತ್ಯೇಕ ಕ್ಯಾಂಪಸ್ ನಿರ್ಮಾಣ ಮಾಡಲು ಸ್ಥಳ ವೀಕ್ಷಣೆ ಮಾಡಲು ಬಂದಿದ್ದು, ಈಗಾಗಲೇ 65 ಎಕರೆ ಪ್ರದೇಶವನ್ನು ಐಐಐಟಿ ಕಾಲೇಜಿನ ನೋಡಲ್ ಅಧಿಕಾರಿಗೆ ವಹಿಸಲಾಗಿದೆ. ಐಐಐಟಿಗೆ 11 ಕೋಟಿ ಅನುದಾನ ಲಭ್ಯವಿದ್ದು, ಸರ್ಕಾರದಿಂದ ಪ್ರತಿ ವರ್ಷವೂ ಈ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಸಂಶೋಧನೆ ನಡೆಯಲಿದೆ: ಈ ಪ್ರದೇಶದಲ್ಲಿ ಸರ್ಕಾರದ 56 ಎಕರೆ ಜಮೀನಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯವಾಗಿ 2 ಎಕರೆ ಜಮೀನನ್ನು ಒದಗಿಸಲಾಗುವುದು. ಐಐಐಟಿ ಕಾಲೇಜಿನಲ್ಲಿ ಸಂಶೋಧನೆ, ಆವಿಷ್ಕಾರ, ಹೊಸ ಯೋಜನೆ, ವ್ಯವಸಾಯ, ಕೈಗಾರಿಕೆ, ಆರೋಗ್ಯ ಕ್ಷೇತ್ರಗಳಲ್ಲಿ ಸಂಶೋಧನೆಗಳು ನಡೆಯಲಿವೆ ಎಂದರು.
ಐಐಐಟಿಯಿಂದ ಜಿಲ್ಲೆಯ ಹಲವು ಇಂಜಿನಿಯರಿಂಗ್ ಕಾಲೇಜುಗಳಿಗೆ ಶಕ್ತಿ ತುಂಬಿದಂತಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಸ್ಟಾರ್ಟ್ ಅಪ್ಗಳನ್ನು ಪ್ರಾರಂಭಿಸಲು ಸಹ ಸಹಕಾರಿಯಾಗುತ್ತದೆ. ಈ ಕ್ಯಾಂಪಸ್ ಜೊತೆಗೆ ನಗರ ಪ್ರದೇಶದಲ್ಲಿ ಒಂದು ಕ್ಯಾಂಪಸ್ ನಿರ್ಮಾಣ ಮಾಡಲು ನಿವೇಶನಕ್ಕಾಗಿ ಮನವಿ ಸಲ್ಲಿಸಲಾಗುವುದು ಎಂದರು.
ಒಟ್ಟು 125 ಕೋಟಿ ಅವಶ್ಯ ಐಐಐಟಿಗೆ ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಮತ್ತು ಕೇಂದ್ರದಿಂದ ಶೇ.50ರಷ್ಟು ಅನುದಾನ ಬಿಡುಗಡೆ ಮಾಡಲು ಈಗಾಗಲೇ ಅನುಮತಿ ನಿಡಲಾಗಿದ್ದು, ಒಟ್ಟು 125 ಕೋಟಿ ರೂ.ಗಳ ಅನುದಾನ ಬೇಕಾಗುತ್ತದೆ ಎಂದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ರಾಜಾ ಅಮರೇಶ್ವರ ನಾಯಕ, ಮಾನವಿ ಶಾಸಕ ರಾಜವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಸಹಾಯಕ ಆಯುಕ್ತ ಸಂತೋಷ, ಕಾಮಗೌಡ ಮೊದಲಾದವರಿದ್ದರು.