Tuesday, July 5, 2022

Latest Posts

ರಾಷ್ಟ್ರಕ್ಕಾಗಿ 31 ವರ್ಷಗಳ ಕರ್ತವ್ಯವನ್ನು ನಿರ್ವಹಿಸಿ ಹುಟ್ಟೂರಿಗೆ ಮರಳಿದ ಯೋಧ ರತನ್‌ಸಿಂಗ್‌ರಿಗೆ ಅದ್ದೂರಿ ಸ್ವಾಗತ

ಹೊಸದಿಗಂತ ವರದಿ, ಶಿವಮೊಗ್ಗ:

ರಾಷ್ಟ್ರಕ್ಕಾಗಿ 31 ವರ್ಷಗಳ ಸುಧೀರ್ಘ ಕರ್ತವ್ಯವನ್ನು ನಿರ್ವಹಿಸಿ, ಸಾರ್ಥಕ ಸೇವೆಯಲ್ಲಿ ನಿವೃತ್ತಿಯನ್ನು ಪಡೆದು ಹುಟ್ಟೂರಿಗೆ ಮರಳಿದ ವೀರಯೋಧ ರತನ್‌ಸಿಂಗ್‌ರಿಗೆ ಗ್ರಾಮಸ್ಥರು ಹೃದಯ ತುಂಬಿದ ಅಭಿಮಾನದಿಂದ ಸ್ವಾಗತ ಕೋರಿ ಗ್ರಾಮಕ್ಕೆ ಬರಮಾಡಿಕೊಂಡರು.
ಯೋಧ ರತನ್‌ಸಿಂಗ್ ತನ್ನ ಹುಟ್ಟೂರು ರಿಪ್ಪನ್‌ಪೇಟೆ ಸಮೀಪದ ವಡಗೆರೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಯುವಕರು ಪಟಾಕಿ ಸಿಡಿಮದ್ದುಗಳನ್ನು ಸಿಡಿಸಿ, ಸಂಭ್ರಮದಿಂದ ಭಾರತ್ ಮಾತಾಕೀ ಜೈ ಘೋಷಣೆ ಮೊಳಗಿಸಿದರೆ, ವನಿತೆಯರು ಆರತಿಯನ್ನು ಬೆಳಗಿ ಯೋಧನಿಗೆ ವಿಜಯ ಸಿಂಧೂರವನ್ನಿಟ್ಟು, ಕಾಲು ತೊಳೆದು ಆಹ್ವಾನವಿತ್ತರು. ಇನ್ನು ಕೆಲವರು ಯೋಧನ ಪಾದಸ್ಪರ್ಶಿಸಿ ನಮಸ್ಕರಿಸುತ್ತಿದ್ದಂತೆ ಧನ್ಯತಾಭಾವವನ್ನು ಹೊಂದಿದ ವೀರಯೋಧನ ಕಣ್ಣಾಲಿಗಳು ತುಂಬಿಬಂದವು. ಇಂತಹ ಅವಿಸ್ಮರಣೀಯ ಸಂದರ್ಭದಲ್ಲಿ ಹುಟ್ಟೂರಿನ ಜನ ತೋರುತ್ತಿರುವ ಗೌರವಾಧಾರಗಳಿಂದ ಬಾವುಕರಾದ ಯೋಧ ಆತ್ಮೀಯರ ಆಲಿಂಗನದೊಂದಿಗೆ ಆನಂದಭಾಷ್ಪ ಸುರಿಸಿದರು.
ಸಂಸತ್ ಭವನದಲ್ಲೂ ಕೆಲಸ
ರತನ್‌ಸಿಂಗ್ ಮಧ್ಯಪ್ರದೇಶದ ನಿಮುಚ್ಚ್‌ನಲ್ಲಿ ತರಬೇತಿ ಪಡೆದು 1990 ನೇ ಸಾಲಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ನಂತರದ ದಿನಗಳಲ್ಲಿ ವಿಎಸ್‌ಜಿ ಕಮಾಂಡೋ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತ ರಾಷ್ಟ್ರ ರಕ್ಷಣೆಯ ಜೊತೆಗೆ ದೇಶದ ಗಣ್ಯಾತೀಗಣ್ಯರ ರಕ್ಷಣೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಂಜಾಬ್, ಚಂಡಿಗಢ, ತ್ರಿಪುರ, ಕಾಶ್ಮೀರ, ಅಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ್, ಉತ್ತರಪ್ರದೇಶಗಳ ಸಹಿತ ನವದೆಹಲಿಯ ಸಂಸತ್ ಭವನದಲ್ಲಿಯೂ ಸಹ ವಿಶೇಷ ಕರ್ತವ್ಯ ನಿರ್ವಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss