ಹೊಸ ದಿಗಂತ ವರದಿ, ಮೈಸೂರು:
ಭಾರತ ಸರ್ಕಾರ ಜನವರಿ 15ರಿಂದ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಕಲೋತ್ಸವದಲ್ಲಿ ಸ್ಪರ್ಧಿಸಲು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಚಿತ್ರಕಲಾ ಶಿಕ್ಷಕಿ ಕೆ. ಸಂಗೀತಾ ತಿಳಿಸಿದ್ದಾರೆ.
ಶಿಕ್ಷಣದಲ್ಲಿ ಕಲೆಗಳನ್ನು ಉತ್ತೇಜಿಸಿ, ಪೋಷಿಸುವ ಮೂಲಕ ದೇಶದ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಮತ್ತು ಅದರ ವೈವಿಧ್ಯತೆಯ ಅರಿವನ್ನು ಶಾಲಾ ಮಕ್ಕಳಿಗೆ ಮೂಡಿಸಲು ಭಾರತ ಸರ್ಕಾರದ ಶಾಲಾ ಶಿಕ್ಷಣ ಸಚಿವಾಲಯದ ವತಿಯಿಂದ ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕಲೋತ್ಸವ’ ಸ್ಪರ್ಧೆಗೆ ಕರ್ನಾಟಕ ಸರ್ಕಾರ 18 ವಿದ್ಯಾರ್ಥಿಗಳನ್ನು ಕಳುಹಿಸುತ್ತದೆ. ಈ ಪೈಕಿ ದೃಶ್ಯಕಲೆ ವಿಭಾಗದಲ್ಲಿ ಒಟ್ಟು
6 ಮಕ್ಕಳು ಆಯ್ಕೆ ಆಗುತ್ತಾರೆ ಅದರಲ್ಲಿ ಸರಗೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಐಶ್ವರ್ಯ ಜಿ. ಅವರು 3ಡಿ ಸ್ಪರ್ಧೆಯಲ್ಲಿ ಹಾಗೂ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಚಂದನ ಎ. ಅವರು ಸ್ಥಳೀಯ ಆಟಿಕೆಗಳು ಮತ್ತು ಆಟಗಳ ಸ್ಪರ್ಧೆಯಲ್ಲಿ ಆಯ್ಕೆಯಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಐಶ್ವರ್ಯ ಜಿ. ಅವರು 3ಡಿ ಸ್ಪರ್ಧೆಯಲ್ಲಿ ಮಣ್ಣಿನಿಂದ ಹುಲಿವಾಹನದಲ್ಲಿ ಕುಳಿತ ಶ್ರೀಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ರಚಿಸಿದ್ದು ಆಯ್ಕೆಗೆ ಪರಿಗಣಿತವಾಗಿದೆ. ಚಂದನ ಎ. ಅವರು ಸೋರೆಕಾಯಿಯ ಮೇಲೆ ಮೂಡಿಸಿದ ವರ್ಣಚಿತ್ರಕಲೆಗಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಕಲೋತ್ಸವವು 2015ರಿಂದ ಪ್ರತಿವರ್ಷ ನವದೆಹಲಿಯಲ್ಲಿ ನಡೆಯುತ್ತದೆ. ಒಟ್ಟು 9 ಪ್ರಕಾರದ ಸ್ಪರ್ಧೆಗಳಿರುತ್ತವೆ. ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ರಾಜ್ಯಮಟ್ಟದಲ್ಲಿ ಪ್ರದರ್ಶನ ನೀಡಬೇಕು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಮಕ್ಕಳನ್ನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.
ಚಿತ್ರಕಲಾ ಶಿಕ್ಷಕಿ ಸಂಗೀತಾ ಕೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಲಾಭ್ಯಾಸ ಮಾಡಿ, ಈ ಸಾಧನೆ ಮಾಡಿದ್ದಾರೆ. ಪ್ರತಿ ವರ್ಷ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟಕ್ಕೆ ಕರ್ನಾಟಕದಿಂದ ಆಯ್ಕೆಯಾದ ಮಕ್ಕಳ ಪೈಕಿ ನಮ್ಮ ಶಾಲೆಯ ಇಬ್ಬರು ಮಕ್ಕಳು ಆಯ್ಕೆಯಾಗಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಜಿ.ಹೆಚ್. ಮಲ್ಲೇಶ್ ತಿಳಿಸಿದ್ದಾರೆ.