Wednesday, June 29, 2022

Latest Posts

ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ನೂತನ ದಾಖಲೆ ನಿರ್ಮಿಸಿದ ಕೊಡಗಿನ ಉನ್ನತಿ

ಹೊಸದಿಗಂತ ವರದಿ, ಕೊಡಗು:

ಭೌಗೋಳಿಕವಾಗಿ ಪುಟ್ಟ ಜಿಲ್ಲೆಯಾಗಿದ್ದರೂ, ದೇಶಕ್ಕೆ ಸಾವಿರಾರು ಯೋಧರು ಹಾಗೂ ಕ್ರೀಡಾಪಟುಗಳನ್ನು ನೀಡಿರುವ ಕೊಡಗಿನ ಯುವತಿಯೊಬ್ಬಳು ರಾಷ್ಟ್ರ ಮಟ್ಟದಲ್ಲಿ ನೂತನ ದಾಖಲೆ ನಿರ್ಮಿಸುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಫೆಬ್ರವರಿ 8 ರಂದು 80 ಮೀಟರ್ ಹರ್ಡಲ್ಸ್ ಹಾಗೂ ಫೆಬ್ರವರಿ 9 ರಂದು ನಡೆದ 300 ಮೀಟರ್ ಹರ್ಡಲ್ಸ್‌ನಲ್ಲಿ ಉನ್ನತಿ ಹೊಸ ದಾಖಲೆ ಮಾಡಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಉನ್ನತಿ ಅಯ್ಯಪ್ಪ 80 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ 11.50 ಸೆಕೆಂಡ್ಸ್‌ನಲ್ಲಿ ಗುರಿ ತಲುಪುವ ಮೂಲಕ ನೂತನ ದಾಖಲೆ ಸೃಷ್ಟಿಸಿ, ಚಿನ್ನದ ಪದಕ ಪಡೆದುಕೊಂಡಿದ್ದಾರೆ.300 ಮೀಟರ್ಸ್ ಹರ್ಡಲ್ಸ್‌ನಲ್ಲೂ 40.11 ಸೆಕೆಂಡ್‌ನಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗಳಿಸಿದ್ದಾರೆ.

16 ವರ್ಷ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಉನ್ನತಿ ಈ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ.

ಕೊಡಗಿನವರಾದ ಮಾಜಿ ಕ್ರೀಡಾಪಟು ಡಬ್ಬಲ್ ಒಲಿಂಪಿಯನ್ ಖ್ಯಾತಿಯ ಬೊಳ್ಳಂಡ ಪ್ರಮೀಳಾ ಹಾಗೂ ಅಂತರರಾಷ್ಟ್ರೀಯ ಅಥ್ಲೀಟ್ ಪ್ರಸ್ತುತ ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ಆಗಿರುವ ಬೊಳ್ಳಂಡ ಅಯ್ಯಪ್ಪ ದಂಪತಿಯ ಪುತ್ರಿಯಾಗಿರುವ ಉನ್ನತಿ ತಾಯಿಯಂತೆ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ.

ಈ ಹಿಂದೆ 1979ರಲ್ಲಿ ಭಾರತದ ಖ್ಯಾತ ಕ್ರೀಡಾ ತಾರೆ ಪಿ.ಟಿ. ಉಷಾ ಅವರು 16 ವರ್ಷದೊಳಗಿನ ಅಥ್ಲೆಟಿಕ್ಸ್ ಕೂಟದಲ್ಲಿ ಈ ವಿಭಾಗದಲ್ಲಿ 12.2 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು 1985ರಲ್ಲಿ ಕರ್ನಾಟಕದ ಎ.ಎನ್. ರೇಖಾ ಸರಿಗಟ್ಟಿದ್ದರು. ಇದೀಗ ಉನ್ನತಿ 11.50 ಸೆಕೆಂಡ್ಸ್ ನಲ್ಲಿ ಗುರಿ ತಲುಪಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಫೆಬ್ರವರಿ 10ರಂದು ನಡೆದ 300 ಮೀಟರ್ ಸ್ಪರ್ಧೆಯಲ್ಲಿ 40.11 ಸೆಕೆಂಡ್‌ನಲ್ಲಿ ಗುರಿ ತಲುಪಿ ಪಶ್ಚಿಮ ಬಂಗಾಳದ ಯುವತಿಯ ಹೆಸರಲ್ಲಿದ್ದ ದಾಖಲೆಯನ್ನು ಉನ್ನತಿ ಮುರಿದಿದ್ದಾರೆ.

ಈ ಹಿಂದೆ ಉನ್ನತಿಯ ತಾಯಿ ಪ್ರಮೀಳಾ (ಜಿ.ಜಿ. ಪ್ರಮೀಳಾ) ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಕ್ರೀಡಾಪಟುವಾಗಿದ್ದು, ಉನ್ನತಿಗೆ ಆಕೆಯ ತಂದೆ ಅಯ್ಯಪ್ಪ ಅವರೇ ತರಬೇತಿ ನೀಡಿರುವುದು ವಿಶೇಷವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss