ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಪೊನ್ನಂಪೇಟೆ:
ಯುವ ನಾಯಕರ ಮತ್ತು ಉದ್ಯಮಶೀಲರ ವಿಶ್ವವ್ಯಾಪ್ತಿ ಒಕ್ಕೂಟದ ಭಾಗವಾಗಿರುವ ಜೆಸಿಐ ಭಾರತದ ವತಿಯಿಂದ ಆಗಸ್ಟ್ 8ರಂದು ದೇಶದಾದ್ಯಂತ ಏಕಕಾಲಕ್ಕೆ ನಡೆದ ‘ಜೆಸಿಐ ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆ -2021’ (NLTS)ರ ಫಲಿತಾಂಶದಲ್ಲಿ ಕೊಡಗಿನ ಅಪೇಕ್ಷಾ ದೇಚಮ್ಮ ಜೇಸಿಸ್ ವಲಯ 14ರಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಅದ್ವಿತೀಯ ಸಾಧನೆಗೈದಿದ್ದಾರೆ.
ವಲಯ 14ರಲ್ಲಿರುವ ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ಮೂಲಕ ಕಳೆದ ತಿಂಗಳ 8ರಂದು ಆನ್ಲೈನ್ ಮೂಲಕ ಪರೀಕ್ಷೆ ಬರೆದ ಗೋಣಿಕೊಪ್ಪಲು ಬಳಿಯ ಕಳತ್ಮಾಡಿನ ಲಯನ್ಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಪೇಕ್ಷಾ ದೇಚಮ್ಮ ಇಡೀ ವಲಯದಲ್ಲಿ ಪರೀಕ್ಷೆ ಎದುರಿಸಿದ ಒಟ್ಟು 10,507 ವಿದ್ಯಾರ್ಥಿಗಳ ಪೈಕಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಗಮನಸೆಳೆದಿದ್ದಾರೆ. ಜೊತೆಗೆ ಈ ಸಾಧಕ ವಿದ್ಯಾರ್ಥಿ ಆಕರ್ಷಕ ಪಾರಿತೋಷಕ ಸೇರಿದಂತೆ ರೂ 5 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜೆಸಿಐ ಭಾರತವು ಪ್ರತಿವರ್ಷ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗಾಗಿ ಈ ರಾಷ್ಟ್ರಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು ಆಯೋಜಿಸುತ್ತಿದೆ. 2011ರಲ್ಲೂ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಈ ಪರೀಕ್ಷೆ ಬರೆದಿದ್ದ ಕಾಪ್ಸ್ ವಿದ್ಯಾರ್ಥಿಯೊಬ್ಬರಿಗೆ ಇಡೀ ವಲಯದಲ್ಲೇ ಪ್ರಥಮ ಸ್ಥಾನ ದೊರೆತಿತ್ತು.
ಅಪೇಕ್ಷಾ ದೇಚಮ್ಮ ಅವರು ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿಗಳಾದ ವಿ.ಎಂ. ಲವ ಮತ್ತು ವಿನು ದಂಪತಿಯ ಪುತ್ರಿ.