ಹೊಸದಿಗಂತ ವರದಿ,ಶಿವಮೊಗ್ಗ:
ನಿರ್ಮಾಣ ಉದ್ಯಮದ ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ವೈಜ್ಞಾನಿಕವಾಗಿ ಹೆಚ್ಚಳ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಬಿಲ್ಡರ್ಸ್ ಅಸೋಷಿಯೇಶನ್ ಜಿಲ್ಲಾ ಶಾಖೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಿಮೆಂಟ್ ಹಾಗೂ ಕಬ್ಬಿಣ ಉತ್ಪಾದನೆಯ ದೊಡ್ಡ ಕಂಪನಿಗಳು ಅವೈಜ್ಞಾನಿಕವಾಗಿ ಬೆಲೆ ಹೆಚ್ಚಳ ಮಾಡುತ್ತಿರುವುದರಿಂದ ಇದು ನೇರವಾಗಿ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆ ಹೆಚ್ಚಳದಿಂದಾಗಿ ಜನ ಸಾಮಾನ್ಯರು ಮನೆ ಕಟ್ಟುವುದೇ ದುಸ್ತರವಾಗಿದೆ. ಗುತ್ತಿಗೆ ಹಿಡಿದಿರುವ ಗುತ್ತಿಗೆದಾರರಿಗೂ ಇದು ತೀವ್ರ ಹೊರೆಯಾಗಿ ಪರಿಣಮಿಸಿದೆ ಎಂದು ದೂರಿದ್ದಾರೆ. ಕಂಪನಿಗಳು ಸಾಮರ್ಥ್ಯಕ್ಕಿಂತ ಕಡಿಮೆ ಸಿಮೆಂಟ್ ಹಾಗೂ ಕಬ್ಬಿಣ ಉತ್ಪಾದನೆ ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿ ಮಾಡುತ್ತಿವೆ. ಬೇಡಿಕೆ ಹೆಚ್ಚಿದೆ ಎಂದು ಬಿಂಬಿಸಿ ಇರುವ ಸರಕಿಗೆ ಬೆಲೆ ಹೆಚ್ಚಳ ಮಾಡಿ ಜನರನ್ನು ದೋಚುತ್ತಿವೆ. ಇದರ ವಿರುದ್ಧ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ನೇಮಕ ಮಾಡಬೇಕೆಂದಿರುವ ಪ್ರತಿಭಟನಾಕಾರರು ಸಾಮರ್ಥ್ಯಕ್ಕಿಂತ ಕಡಿಮೆ ಸಿಮೆಂಟ್ ಉತ್ಪಾದನೆ ಮಾಡಿದ ಕಂಪನಿಗಳಿಗೆ ದಂಡ ವಿಧಿಸಿದ್ದರೂ ಕೂಡ ಕಂಪನಿಗಳು ವರ್ತನೆ ತಿದ್ದಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.