Sunday, September 25, 2022

Latest Posts

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮೌಲ್ಯಧಾರಿತ ಶಿಕ್ಷಣ ದೊರೆಯಲಿದೆ : ಕೇಂದ್ರ ಸಚಿವ ರಾಜನಾಥ್‌ಸಿಂಗ್

ಮೈಸೂರು: ದೇಶದ ಪ್ರತಿಯೊಬ್ಬ ಪ್ರಜೆಗೂ ಕೌಶಲ್ಯಯುಕ್ತ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ತಿಳಿಸಿದರು. ಶನಿವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಯವರ ೧೦೫ ನೇ ಜಯಂತಿ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜಗತ್ತು ಆಧುನಿಕತೆ ನಾಗಲೋಟದಲ್ಲಿದೆ. ಕಂಪ್ಯೂಟರ್ ಇಡೀ ಜಗತ್ತಿನ ವಿಷಯಗಳನ್ನು ತಿಳಿಯಬಹುದಾಗಿದೆ. ಕಂಪ್ಯೂಟರ್ ನಿರ್ಮಾಣ ಮಾಡುವುದು ವಿದ್ವತ್ ಆಗಿದೆ. ಇಂತಹ ವಿದ್ವತ್‌ನ ಆಧುನಿಕತಯ ವೇಗಕ್ಕೆ ತಕ್ಕಂತೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಗುಣಮಟ್ಟದ, ಮೌಲ್ಯಧಾರಿತ, ಕೌಶಲ್ಯಯುಕ್ತ ಶಿಕ್ಷಣವನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಬೇಕಾಗಿರುವುದರಿಂದ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡುವ ಮೂಲಕ ಕ್ರಾಂತಿಯನ್ನು ನಡೆಸಲು ಮುಂದಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾದ ಜ್ಞಾನ, ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡಲು ಪ್ರೋತ್ಸಾಹಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಹೇಳಿದರು.
ಇಡೀ ಜಗತ್ತಿನಲ್ಲಿ ಭಾರತವನ್ನು ಆಧುನಿಕ ಸಮರ್ಥ ಹಾಗೂ ಸಶಕ್ತ ದೇಶವನ್ನಾಗಿ ಸಜ್ಜುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಅದೇ ರೀತಿ ನಮ್ಮ ಸಂಸ್ಕೃತಿ, ಪರಂಪರೆಯಲ್ಲೂ ಆತ್ಮನಿರ್ಭರ ಭಾರತ ನಿರ್ಮಾಣವಾಗಬೇಕಾಗಿದೆ. ನಮ್ಮ ಸಂಸ್ಕೃತಿ, ಪರಂಪರೆ ಸಮೃದ್ಧವಾಗಿದೆ. ಹಾಗಾಗಿ ನಾವು ಬೇರೆಯಾವುದನ್ನೂ ಅನುಸರಿಸಬಾರದು, ನಕಲು ಮಾಡಬಾರದು, ನಮ್ಮದೇ ಆದ ಸ್ವಂತಿಕೆಯನ್ನು ಹೊಂದಿರಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದರು.
ಸುತ್ತೂರು ಶ್ರೀಮಠವು ಶಿಕ್ಷಣ, ಸಮಾಜ ಸೇವೆ, ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಆ ಮೂಲಕ ಸಮಾಜ ಪರಿವರ್ತನೆಯ ಕೆಲಸವನ್ನು ನಿರಂತವಾಗಿ ಮಾಡಿಕೊಂಡು ಬರುತ್ತಿದೆ. ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಿಕೊAಡು ಬರುವ ಮೂಲಕ ಸಮಾಜದಲ್ಲಿ ಜ್ಞಾನ ವಿಸ್ತರಣೆಯನ್ನು ಮಾಡುತ್ತಿದೆ. ಗ್ರಾಮೀಣ ಜನರಿಗೂ ಶಿಕ್ಷಣದ ಜ್ಞಾನದ ಬೆಳಕನ್ನು ನೀಡುವ ಮೂಲಕ ಬಡತನ ನಿವಾರಣೆಗೆ ಪ್ರಯತ್ನ ನಡೆಸುತ್ತಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರ ಕಲ್ಯಾಣದ ಗುರಿಯನ್ನಿಟ್ಟುಕೊಂಡು, ಬದ್ಧತೆಯಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಬಡವ, ಬಲ್ಲಿದ ಎನ್ನದೆ ಸಮಾಜದಲ್ಲಿನ ಸರ್ವರಿಗೂ ಶಿಕ್ಷಣವನ್ನು ನೀಡುವ ಮೂಲಕ ತನ್ನ ಶಿಕ್ಷಣ ಸೇವಾ ಯಾತ್ರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ೩೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಸಶಕ್ತ ಭಾರತ ನಿರ್ಮಾನಕ್ಕೆ ಶ್ರೀಮಠವು ತನ್ನದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿದೆ. ದೇಶದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುತ್ತಿದೆ. ಯೋಗ, ಧ್ಯಾನ ಶಿಕ್ಷಣವನ್ನೂ ಇದೀಗ ನೀಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಕಾರ್ಯ ನಡೆಸುತ್ತಿದೆ ಎಂದು ಬಣ್ಣಿಸಿದರು.
ರಾಜೇಂದ್ರ ಮಹಾಸ್ವಾಮೀಜಿ ಅವರು ಮಹಾಸಂತರು, ಅವರ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಮಾದರಿಯಾಗಿ ಪ್ರೇರಣೆಯಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರು ಸುತ್ತೂರು ಶ್ರೀಮಠ-ಗುರುಪರಂಪರೆ ಮತ್ತು ದಿ ಹೆರಿಟೇಜ್ ಆಫ್ ಸುತ್ತೂರು ಮಠ್ ಅನಿಮೇಷನ್ ಚಿತ್ರಗಳ ಬಿಡುಗಡೆ ಮಾಡಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್‌ರು ಪ್ರಸಾದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಯಕ ತಪಸ್ವಿ ಶ್ರೀಶಿವರಾತ್ರಿ ರಾಜೇಂದ್ರಸ್ವಾಮಿಗಾರು ತೆಲುಗು ಅನುವಾದ, ಭಕ್ತಿ ಭಂಡಾರಿ ಬಸವೇಶ್ವರರಿನ್ ವಸನಂಗಳ್ ತಮಿಳು ಅನುವಾದ ಪುನರ್ ಮುದ್ರಣದ ಹಾಗೂ ನೀತಿ ಸಾಮ್ರಾಜ್ಯ ಶತಕ ಕೃತಿಗಳನ್ನು ಬಿಡುಗಡೆ ಮಾಡಿದರು. ಜೆಎಸ್‌ಎಸ್ ಸಂಸ್ಥೆಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಾನಿಧ್ಯವನ್ನು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ವಹಿಸಿದ್ದರು. ಕೇಂದ್ರ ಸಚಿವ ಸುರೇಶ್ ಅಂಗಡಿ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್, ಜೆಎಸ್‌ಎಸ್ ವಿದ್ಯಾಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೆಟ್‌ಸೂರ್ ಮಠ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!