Thursday, August 18, 2022

Latest Posts

ರಿಂಗ್ ರಸ್ತೆಯ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ 573 ಮರಗಳ ತೆರವುಗೊಳಿಸಲು ಅರಣ್ಯ ಇಲಾಖೆ ನಿರ್ಧಾರ

ಹೊಸ ದಿಗಂತ ವರದಿ , ಮೈಸೂರು:

ಗಿಡ, ಮರಗಳನ್ನು ನೆಟ್ಟು, ಪರಿಸರ ಕಾಪಾಡಿ ಎಂದು ಸದಾ ಜನರಿಗೆ ಉಪದೇಶ ಹೇಳುವ ಅರಣ್ಯ ಇಲಾಖೆಯೇ ಮತ್ತೊಂದೆಡೆ ರಸ್ತೆ ನಿರ್ಮಾಣಕ್ಕೆಂದು ಬರೋ ಬರೀ 573 ಮರಗಳನ್ನು ಕಡಿದು ತೆರವುಗೊಳಿಸಲು ನಿರ್ಧರಿಸಿದ್ದು, ಇದಕ್ಕೆ ಪರಿಸರವಾದಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗಿದೆ.
ಮೈಸೂರಿನ ಬನ್ನೂರು ರಿಂಗ್ ರಸ್ತೆ ಜಂಕ್ಷನ್‌ನಿoದ ನಂಜನಗೂಡು ರಿಂಗ್‌ರಸ್ತೆ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಸಲುವಾಗಿ ಸ್ವಾಧೀನಪಡಿಸಿಕೊಂಡ ಜಾಗದಲ್ಲಿರುವ ಸುಮಾರು 573 ಮರಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬAಧ ಶನಿವಾರ ನಗರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ನಡೆಸಲಾಯಿತು.
ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪರಿಸರವಾದಿಗಳು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಮೈಸೂರು ಮಹಾನಗರಪಾಲಿಕೆ ಹಾಗೂ ಮುಡಾ ಅಧಿಕಾರಿಗಳು ಗೈರಾಗಿದ್ದರು. ನೂರಾರು ಸಂಖ್ಯೆಯಲ್ಲಿ ಮರಗಳನ್ನು ತೆರವುಗೊಳಿಸುವ ವಿಚಾರವಾಗಿ ಕೆಲಕಾಲ ಪರಿಸರವಾದಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮಾತನಾಡಿದ ಅರಣ್ಯಾಧಿಕಾರಿಗಳು, ಸರ್ವೀಸ್ ರಸ್ತೆ ವಿಸ್ತರಣೆಗೆ 1 ಸಾವಿರ ಮರಗಳ ತೆರವುಗೊಳಿಸಲು ಗುರುತಿಸಲಾಗಿತ್ತು. ಆದರೀಗ ಆ ಸಂಖ್ಯೆಯನ್ನು 573ಕ್ಕೆ ಇಳಿಸಲಾಗಿದೆ ಎಂದರು. ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತನಾಡಿ, ಸುಮಾರು 9 ಕಿ.ಮೀ. ವರೆಗೆ ಸರ್ವೀಸ್ ರಸ್ತೆಯೇ ಇಲ್ಲ. ಅದನ್ನು ವಿಸ್ತರಣೆ ಮಾಡಬೇಕಿರುವ ಕಾರಣ ಮರಗಳನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಿದೆ. ಅಲ್ಲದೆ, ನಾವು ಎಲ್ಲ ಮರಗಳನ್ನು ಕಡಿಯುವುದಿಲ್ಲ. ಕೆಲವು ಮರಗಳನ್ನು ಸಂರಕ್ಷಣೆ ಮಾಡುತ್ತೇವೆ ಎಂದೂ ಹೇಳಿದರು.
ಪರಿಸರವಾದಿಗಳಾದ ತನುಜಾ, ಭಾನು ಮೋಹನ್, ಲೀಲಾ ಶಿಕವಕುಮಾರ್, ಆಪ್ ಜಿಲ್ಲಾಧ್ಯಕ್ಷೆ ಮಾಲವಿಕ ಗುಬ್ಬಿವಾಣಿ ಇನ್ನಿತರರು ಮರಗಳ ತೆರವು ಕಾರ್ಯವನ್ನು ಕೈಬಿಡಬೇಕು. ರಸ್ತೆ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿದು ಪರಿಸರ ಹಾಳು ಮಾಡುವುದು ಸರಿಯಲ್ಲ. ಒಂದೆಡೆ ಪರಿಸರ ಉಳಿಸುವುದಕ್ಕಾಗಿ ಮರ, ಗಿಡಗಳನ್ನು ಹೆಚ್ಚಾಗಿ ನೆಡಿ ಎಂದು ಹೇಳುವ ಅರಣ್ಯ ಇಲಾಖೆಯವರೇ ಇದೀಗ ಬೆಳೆದು ನಿಂತಿರುವ 573 ಮರಗಳನ್ನು ಕಡಿದು, ಪರಿಸರ ಹಾಳು ಮಾಡಲು ಹೊರಟಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು, ಇಲ್ಲದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!