ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಲಾಕ್ಡೌನ್ ಸಮಯದಲ್ಲಿ ಅದೆಷ್ಟು ವಲಸೆ ಕಾರ್ಮಿಕರು ಹಾಗೂ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ರಿಯಲ್ ಹೀರೋ ಎನಿಸಿಕೊಂಡವರು ಬಾಲಿವುಡ್ ನಟ ಸೋನು ಸೂದ್.
ಇದೀಗ ಅವರು ಈ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತರುವುದಾಗಿ ಹೇಳಿದ್ದು,ತಮ್ಮ ಪುಸ್ತಕದ ಟೈಟಲ್ ರಿವೀಲ್ ಮಾಡಿದ್ದಾರೆ.
ಹೌದು, ಸೋನುಸೂದ್ ತಾವು ಬರೆಯುತ್ತಿರುವ ಪುಸ್ತಕಕ್ಕೆ ‘ಐ ಆ್ಯಮ್ ನಾಟ್ ಮೆಸ್ಸಿಹ್’ ಎಂದು ಹೆಸರಿಟ್ಟಿದ್ದಾರೆ.
ಈ ಪುಸ್ತಕದಲ್ಲಿ ತಾವು ಜನರಿಗೆ ಸಹಾಯ ಮಾಡುವಾಗ ಅವರು ಎದುರಿಸಿದ ಭಾವನಾತ್ಮಕ ಸವಾಲುಗಳ ಕುರಿತು ಸೋನು ಬರೆಯಲಿದ್ದಾರೆ. ಜನರು ಪ್ರೀತಿಯಿಂದ ನನಗೆ ಮೆಸ್ಸಿಹ್ ಎಂದು ಹೆಸರಿಟ್ಟಿದ್ದಾರೆ.
ಆದರೆ ನಾನು ಮೆಸ್ಸಿಹ್ ಅಲ್ಲ(ಮೆಸ್ಸಿಹ್ ಎಂದರೆ ‘ಉದ್ಧಾರಕ’ ಎಂದರ್ಥ. ಮೆಸ್ಸಿಹ್, ಕ್ರೈಸ್ತ ಸಮುದಾಯದಲ್ಲಿ ಬಳಸುವ ಪದ) ಎಂದು ನನಗೆ ಗೊತ್ತು. ನನ್ನ ಹೃದಯ ಹೇಳಿದಂತೆ ನಾನು ನಡೆದುಕೊಂಡೆ. ಮನುಷ್ಯರಾಗಿ ಇನ್ನೊಬ್ಬರ ಕಷ್ಟಸುಖಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಸೋನುಸೂದ್ ಹೇಳಿದ್ದಾರೆ.
ಈ ಪುಸ್ತಕವನ್ನು ಮೀನಾ ಅಯ್ಯರ್ ಕೂಡಾ ಬರೆಯಲಿದ್ದು ಡಿಸೆಂಬರ್ನಲ್ಲಿ ಈ ಪುಸ್ತಕ ಹೊರಬರಲಿದೆ.
ಇನ್ನು ಈ ಬಗ್ಗೆ ಮಾತನಾಡಿದ ಸೋನು, ‘ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಶಕ್ತಿ ನೀಡಿದ ದೇವರಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಲಾಕ್ಡೌನ್ ನಂತರ ನಾನು ಉತ್ತರ ಪ್ರದೇಶ, ಬಿಹಾರ್, ಅಸ್ಸಾಂ, ಉತ್ತರಾಖಂಡ್ ಸೇರಿದಂತೆ ಭಾರತದ ಇತರ ಭಾಗದ ಹೊಸ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ಸುಂದರ ಅನುಭವವನ್ನು ನನ್ನ ಪುಸ್ತಕದಲ್ಲಿ ಬರೆಯುವ ಮೂಲಕ ಅದು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಲು ಬಯಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.