ರೇಷ್ಮೆ ಗೂಡಿಗೂ ಕೊರೋನಾ ಆಪತ್ತು: ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ, ಕನಿಷ್ಠ ದರವೂ ಇಲ್ಲ

0
75

ರಾಮನಗರ: ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರೇಷ್ಮೆ ಗೂಡನ್ನು ಕೇಳುವವರು ಇಲ್ಲವಾಗಿದೆ.

ಏಷ್ಯಾದಲ್ಲಿಯೇ ರಾಮನಗರದ ರೇಷ್ಮೆ ಮಾರುಕಟ್ಟೆ ಅತಿದೊಡ್ಡ ಮಾರುಕಟ್ಟೆ. ಇಲ್ಲಿಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರದಿಂದಲೂ ಕೂಡ ರೇಷ್ಮೆಗೂಡು ಬರುತ್ತವೆ. ಆದರೆ, ಈಗ ಕೊರೋನಾ ವೈರಸ್ ಪರಿಣಾಮದಿಂದಾಗಿ ರೈತರ ರೇಷ್ಮೆಗೂಡಿಗೆ ಬೆಲೆಯೇ ಇಲ್ಲದಂತಾಗಿದೆ.

ಇದಕ್ಕೂ ಮೊದಲು ದಿನಕ್ಕೆ 35 ಟನ್ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈಗ ಕಳದೆ ಒಂದು ವಾರದಿಂದ 50 ರಿಂದ 55 ಟನ್ ರೇಷ್ಮೆಗೂಡು ರಾಮನಗರಕ್ಕೆ ಬರುತ್ತಿದೆ. ಕಾರಣ ಈ ಮೊದಲು ಸ್ಥಳೀಯ ಮಾರುಕಟ್ಟೆಗಳಲ್ಲಿ ರೈತರು ತಮ್ಮ ಗೂಡಿನ ಮಾರಾಟ ಮಾಡುತ್ತಿದ್ದರು.

ಕಡಿಮೆಯಾದ ರೇಷ್ಮೆ ಧಾರಣೆ ಬೆಲೆ: ಆದರೆ, ಈಗ ಕೊರೋನಾ ಸೋಂಕಿನಿಂದಾಗಿ ಸ್ಥಳೀಯ ಮಾರುಕಟ್ಟೆಗಳು ಸಂಪೂರ್ಣ ಸ್ತಬ್ಧವಾಗಿದೆ. ಈ ಕಾರಣದಿಂದಾಗಿ ಎಲ್ಲರೂ ಕೂಡ ದೊಡ್ಡ ಮಾರುಕಟ್ಟೆಯಾದ ರಾಮನಗರಕ್ಕೆ ತಮ್ಮ ರೇಷ್ಮೆಗೂಡನ್ನು ತರುತ್ತಿದ್ದಾರೆ.  ರೇಷ್ಮೆ ಮಾರುಕಟ್ಟೆಯಲ್ಲಿ ಸರಕು ಹೆಚ್ಚಳವಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದೆ ಕೆ.ಜಿ.ರೇಷ್ಮೆಗೂಡಿಗೆ 400 ರಿಂದ 550 ರೂಪಾಯಿ ಬೆಲೆಯಿತ್ತು. ಈಗ  200 ರಿಂದ 250 ರೂ.ಗೆ ಇಳಿದಿದೆ. 150 ರಿಂದ 200 ರೂ. ವ್ಯತ್ಯಾಸವಾಗಿದೆ ಎಂದು ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಮುನ್ಸಿಬಸಯ್ಯ ತಿಳಿಸುವರು.

ಬೆಂಬಲ ಬೆಲೆಗೆ ರೈತರ ಒತ್ತಾಯ: ಕೊರೋನಾದಿಂದಾಗಿ ರೈತರ ರೇಷ್ಮೆಗೂಡಿಗೆ ಬೆಲೆಯಿಲ್ಲದಂತಾಗಿದೆ ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ರೇಷ್ಮೆಗೂಡಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಭಾಗಗಳಿಂದಲೂ ಕೂಡ ರೈತರು ರಾಮನಗರ ಮಾರುಕಟ್ಟೆಗೆ ಬರುತ್ತಿದ್ದಾರೆ.

ದಿನವೊಂದಕ್ಕೆ 2 ರಿಂದ 3 ಸಾವಿರ ರೇಷ್ಮೆ ಬೆಳೆಗಾರರು ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೂ ಸಹ ರೈತರ ಗೂಡಿಗೆ ಸೂಕ್ತ ಬೆಲೆಯಿಲ್ಲ, ಡೀಲರ್ಸ್‌ಗಳು ನಮ್ಮ ಗೂಡಿನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿಲ್ಲ. ಕಾರಣ ಕೇಳಿದರೆ ಕಚ್ಚಾ ರೇಷ್ಮೆಯನ್ನೇ ಮಾರಾಟ ಮಾಡಲು ಸಾಧ್ಯವಾಗದೆ ಹಳೆ ಸರಕು ಇನ್ನು ಬಾಕಿ ಇದೆ. ಹಾಗಾಗಿ ನಿಮ್ಮ ರೇಷ್ಮೆಗೂಡನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಲು ಸಾಧ್ಯವಿಲ್ಲವೆಂಬ ಕೂಗು ಕೇಳಿ ಬರುತ್ತಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here