ಮಂಡ್ಯ: ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ದೊರೆಯಬೇಕು. ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವಂತಹ ಹಕ್ಕು ರೈತನಿಗೇ ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದಾರೆ. ಇದು ರೈತರಿಗೆ ವರದಾನವಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ ತಿಳಿಸಿದರು.
ಭಾರತೀಯ ಜನತಾ ಪಕ್ಷ ಹಾಗೂ ರೈತ ಮೋರ್ಚಾ ವತಿಯಿಂದ ನಗರದ ಹೊಸಹಳ್ಳಿ ವೃತ್ತದಲ್ಲಿ ನಡೆದ ನೂತನ ಕೃಷಿ ಮಸೂದೆ ಕುರಿತು ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಜ್ಞರ ಸಮಿತಿ ರಚಿಸಿದ್ದು, ಆ ಸಮಿತಿ ಕೊಟ್ಟ ವರದಿ ಆಧಾರದ ಮೇಲೆ, 1955ರಲ್ಲಿ ಎಪಿಎಂಸಿ ಕಾಯಿದೆ ಜಾರಿಗೊಳಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ಸರ್ಕಾರಗಳು ಇದಕ್ಕೆ ತಿದ್ದುಪಡಿ ತಂದಿರಲಿಲ್ಲ. ಎಲ್ಲ ಕಾಯಿದೆಗಳಿಗೂ ಕಾಲ ಕಾಲಕ್ಕೆ ಬದಲಾವಣೆ, ತಿದ್ದುಪಡಿ ಮಾಡಲಾಗಿದೆ. ರೈತರ ಆದಾಯ ಹೆಚ್ಚು ಮಾಡಬೇಕು ಎಂಬ ಉದ್ದೇಶದಿಂದ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.
ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕು. ಅವರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬರಬೇಕು. ಎಪಿಎಂಸಿಗಳಲ್ಲಿ ಮಾರಾಟ ಮಾಡಲು ರೈತ ಹೋದರೆ ಅವನಿಗೆ ಶೋಷಣೆಯಾಗುತ್ತದೆ. ದಲ್ಲಾಳರು, ವರ್ತಕರು ವಂಚಿಸಿ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತ ತಾನು ಬೆಳೆದ ಉತ್ಪನ್ನವನ್ನು ದೇಶದ ಯಾವುದೇ ಮೂಲೆಗಾದರೂ ಮಾರಾಟ ಮಾಡುವಂತಹ ಹಕ್ಕು ಇರಬೇಕು ಎಂಬ ಉದ್ದೇಶದಿಂದ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಇದು ತಪ್ಪೇ ಎಂದು ಪ್ರಶ್ನಿಸಿದರು.
ಎಪಿಎಂಸಿಗಳು ಮತ್ತು ಮಾರುಕಟ್ಟೆಗಳ ಆಯಕಟ್ಟಿನ ಸ್ಥಳಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಏಜೆಂಟರು, ವರ್ತಕರು, ದಲ್ಲಾಳಿಗಳು ಇದ್ದಾರೆ. ಅವರನ್ನು ಉದ್ದಾರ ಮಾಡಲು ರೈತರಿಗೆ ಅನ್ಯಾಯವಾದರೂ ಈ ಕಾಯಿದೆನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.