ಹೊಸ ದಿಗಂತ ವರದಿ, ಮಂಡ್ಯ:
ಟ್ರಾಕ್ಟರ್-ಟಿಲ್ಲರ್ ಸೇರಿದಂತೆ ಇತರೆ ವಾಹನಗಳಲ್ಲಿ ಮಾತ್ರ ಟ್ರೈಲರನ್ನು ಕಾಣಬಹುದಾಗಿದೆ. ಆದರೆ ಇಲ್ಲೊಬ್ಬ ರೈತ ತನ್ನ ದ್ವಿಚಕ್ರ ವಾಹನಕ್ಕೆ ಟ್ರೈಲರ್ ಅಳವಡಿಸಿಕೊಂಡು ಭತ್ತ ಇತರೆ ಉತ್ಪನ್ನಗಳನ್ನು ಸಾಗಿಸುವ ವಿನೂತನ ಪ್ರಯೋಗ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ಮದ್ದೂರು ತಾಲೂಕು, ಅಣ್ಣೂರು ಗ್ರಾಮದ ಪಟೇಲ್ ಬೋರೇಗೌಡ ಎಂಬುವರೇ ದ್ವಿಚಕ್ರ ವಾಹನಕ್ಕೆ ಟ್ರೈಲರ್ ಅಳವಡಿಸಿಕೊಂಡು ಸುಮಾರು 400 ರಿಂದ 500 ಕೆ.ಜಿ. ಕೃಷಿ ಉತ್ಪನ್ನಗಳ ಸಾಗಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಕೃಷಿ ಉತ್ಪನ್ನಗಳನ್ನು ಎತ್ತಿನ ಗಾಡಿಗಳಲ್ಲಿ ಗ್ರಾಮೀಣ ಭಾಗದಲ್ಲಿ ಸಾಗಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಸಣ್ಣ ಪ್ಟುಟ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ದ್ವಿಚಕ್ರ ವಾಹನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಾಗಿಸಲಾಗುತ್ತಿತ್ತು. ಇದರಿಂದ ಸಣ್ಣ ಪುಟ್ಟ ತೊಂದರೆಗಳು ಕಂಡುಬರುತ್ತಿದ್ದವು. ಇದನ್ನೆಲ್ಲವನ್ನೂ ಗಮನಿಸುತ್ತಿದ್ದ ಪಟೇಲ್ ಬೋರೇಗೌಡ, ಮದ್ದೂರು ತಾಲೂಕು ಅರೆಚಾಕನಹಳ್ಳಿ ಗ್ರಾಮದ ಸುಂದರೇಶ್ ಅವರು ಇದೇ ರೀತಿ ಬೈಕ್ಗೆ ಅಳವಡಿಸುವ ಟ್ರೈಲರನ್ನು 3×4 ಅಡಿ ಅಳತೆಯ ತಯಾರಿಸಿ ಕೃಷಿ ಉತ್ಪನ್ನಗಳನ್ನು ಸಾಗಿಸುತ್ತಿದ್ದರು.
ಈ ವಿನೂತನ ಪ್ರಯೋಗವನ್ನು ನೋಡಿ ಪ್ರಭಾವಿತನಾದ ಬೋರೇಗೌಡ ತಾನೂ ಅದರಂತೆ ಏಕೆ ಮಾಡಬಾರದು ಎಂಬ ಚಿಂತನೆ ನಡೆಸಿ, ತಾನೇ ವರ್ಕ್ಷಾಪ್ನಲ್ಲಿ 4*6 ಅಡಿ ಅಳತೆಯ ಟ್ರೈಲರನ್ನು ಸಿದ್ಧಪಡಿಸಿ ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸುವ ವ್ಯವಸ್ಥೆ ಮಾಡಿದರು. ನಂತರದ ದಿನಗಳಲ್ಲಿ ಬೇರೆ ಬೇರೆ ರೈತರ ಕೃಷಿ ಉತ್ಪನ್ನಗಳನ್ನೂ ಸಹ ಸಾಗಿಸಲು ತೊಡಗಿದರು.