ಹೊಸ ದಿಗಂತ ವರದಿ, ಕೋಲಾರ:
ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆ ಕರೆದು ನಾಲ್ಕೈದು ದಿನಗಳಲ್ಲಿ ರೈತರಿಂದ ಖರೀದಿಸುತ್ತಿರುವ ಹಾಲಿನ ದರ ಏರಿಕೆಗೆ ಕ್ರಮ ಕೈಗೊಳ್ಳುವುದಾಗಿ ಮಾಲೂರು ಶಾಸಕ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.
ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಲ್ಕ್ ಮಿಲ್ಕ್ ಕೂಲರ್ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಬಿಎಂಸಿಗಳ ಸ್ಥಾಪನೆಯಿಂದ ಹಾಲಿನ ಗುಣಮಟ್ಟ ಶೇ.45 ರಿಂದ 95ರಷ್ಟು ಹೆಚ್ಚಳವಾಗಿದೆ, ಇಡೀ ಜಿಲ್ಲೆಯಲ್ಲಿ ಕ್ಯಾನ್ಗಳಲ್ಲಿ ಹಾಲು ಸಂಗ್ರಹಕ್ಕೆ ಕಡಿವಾಣ ಹಾಕಿ ಬಿಎಂಸಿಗಳ ಮೂಲಕ ಸಂಗ್ರಹಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಒಕ್ಕೂಟ ದಿನಕ್ಕೆ 10 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದೆ, ಹಾಲಿನ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಬೆಂಗಳೂರು,ಹಾಸನದ ನಂತರದ ಸ್ಥಾನ ಕೋಲಾರ ಪಡೆದುಕೊಂಡಿದೆ ಎಂದು ತಿಳಿಸಿದರು.
ಚೆಲುವನಹಳ್ಳಿ ಎಂಪಿಸಿಎಸ್ ದಿನಕ್ಕೆ 850 ಲೀ.ಹಾಲು ಸಂಗ್ರಹಿಸುತ್ತಿದ್ದು, ಅತ್ಯುತ್ತಮ ಡೇರಿಗಳಲ್ಲಿ ಒಂದಾಗಿದೆ, ಇಲ್ಲಿನ ಅಧ್ಯಕ್ಷ ನಾಗರಾಜಪ್ಪ ಅವರ ಪರಿಶ್ರಮದಿಂದ ಡೇರಿ ತಿಂಗಳಿಗೆ 50 ಸಾವಿರ ಲಾಭ ಗಳಿಸುತ್ತಿರುವುದು ಮತ್ತು ಗ್ರಾಮಕ್ಕೆ ಶುದ್ದ ನೀರಿನ ಘಟಕ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಒಕ್ಕೂಟದಿಂದ ಬಿಎಂಸಿಗೆ 17 ಲಕ್ಷ, ಕಟ್ಟಡಕ್ಕೆ 3 ಲಕ್ಷ ನೆರವು ನೀಡಲಾಗುತ್ತಿದೆ, ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ನೆರವಾಗುತ್ತಿದೆ, ಬೆಂಗಳೂರಿನಲ್ಲಿ ಉಚಿತ ಹಾಸ್ಟೆಲ್ ಒದಗಿಸಲಾಗಿದೆ, ರಾಸು ಸಾವನ್ನಪ್ಪಿದರೆ 70 ಸಾವಿರ ರೂ ವಿಮೆ ನೀಡಲಾಗುತ್ತಿದೆ ಎಂದರು.
ಒಕ್ಕೂಟ ನೀರಿಗೆ ತಿಂಗಳಿಗೆ 15 ಲಕ್ಷ ಖರ್ಚು ಮಾಡುತ್ತಿತ್ತು, ಇದೀಗ ಹಿಂದೆ ಡಿಸಿಯಾಗಿದ್ದ ಡಿಕೆ ರವಿ ಅವರು ಮಂಜೂರು ಮಾಡಿದ್ದ ೫೨ ಎಕರೆ ಜಮೀನು ನಿರ್ದೇಶಕ ಡಿ.ವಿ.ಹರೀಶ್ ಪ್ರಯತ್ನದಿಂದ ಒಕ್ಕೂಟಕ್ಕೆ ಸಿಕ್ಕಿದೆ, ಇಲ್ಲಿ 10 ಕೊಳವೆ ಬಾವಿಗಳನ್ನು ತೋಡಿ ಪೈಪ್ಲೈನ್ ಮೂಲಕ ನೀರು ಪಡೆಯಲು ಕ್ರಮವಹಿಸಲಾಗಿದೆ ಎಂದರು.
ಕೆಸಿ ವ್ಯಾಲಿ ನೀರು ಜಿಲ್ಲೆಗೆ ಜೀವಾಳ
ಶಾಸಕ ಕೆ.ಶ್ರೀನಿವಾಸಗೌಡ, ಕೆಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ಜಿಲ್ಲೆ ಹಸಿರಾಗುತ್ತಿದೆ, ಕೊಳವೆ ಬಾವಿಗಳಲ್ಲಿ ನೀರು ಹೇರಳವಾಗಿ ಸಿಗುವಂತಾಗಿದೆ, ಕೆಸಿ ವ್ಯಾಲಿ ಬಂದಾಗ ವಿರೋಧಗಳು ಬಂದವು, ಆದರೆ ನಾನು ಆ ನೀರು ಕುಡಿದು ಸಮಸ್ಯೆ ಇಲ್ಲ ಎಂದು ಸಾಬೀತು ಮಾಡಿದೆ ಎಂದರು.
ಕಷ್ಟಕಾಲದಲ್ಲಿ ಜೀವನ ನಡೆಸುವ ಶಕ್ತಿಯನ್ನು ಹೈನೋದ್ಯಮ ಕಲ್ಪಿಸಿಕೊಟ್ಟಿದೆ, ಯರಗೋಳು ಯೋಜನೆ ಮುಗಿದಿದ್ದು, ಮಳೆ ಬಂದರೆ ಕೋಲಾರ,ಬಂಗಾರಪೇಟೆಗೆ ಶುದ್ದ ಕುಡಿಯುವನೀರು ಸಿಗಲಿದೆ ಎಂದರು.
ಕ್ಯಾನ್ ಮುಕ್ತ ತಾಲ್ಲೂಕಾಗಲು ಕ್ರಮ
ಬಿಎಂಸಿ ಉದ್ಘಾಟಿಸಿದ ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ತಾಲ್ಲೂಕಿನಲ್ಲಿ ಶೇ.೧೦೦ ಬಿಎಂಸಿ ಸ್ಥಾಪಿಸುವ ಮೂಲಕ ಕ್ಯಾನ್ಮುಕ್ತ ತಾಲ್ಲೂಕಾಗಿ ಮಾರ್ಪಡಿಸಿದ ತೃಪ್ತಿನನಗಿದೆ ಎಂದರು.
240 ಎಂಪಿಸಿಎಸ್ಗಳು, 22 ಮಹಿಳಾ ಸಂಘಗಳಿರುವ ನಮ್ಮ ತಾಲ್ಲೂಕು ದೊಡ್ಡದು, ಪ್ರತಿ ಹಳ್ಳಿಗೂ ಡೇರಿ ನೀಡುವ ಗುರಿ ಇದೆ, ೨೫ ಮಹಿಳಾ ಸಂಘಗಳನ್ನು ಸ್ಥಾಪಿಸುವುದಾಗಿ ತಿಳಿಸಿ, ಹಾಲಿನ ಗುಣಮಟ್ಟಕ್ಕೆ ಲೋಪವಾದಂತೆ ಎಚ್ಚರವಹಿಸಲು ಕಿವಿಮಾತು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮುಖಂಡ ಕೆ.ಬಿ.ಗೋಪಾಲಕೃಷ್ಣ, ಚೆಲುವನಹಳ್ಳಿ ಗ್ರಾಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಇಂದು ಅಭಿವೃದ್ದಿಯಾದ ಗ್ರಾಮವಾಗಿದೆ ಎಂದು ತಿಳಿಸಿ, ನನ್ನ ತಂದೆಯ ಊರೂ ಇದೇ ಆಗಿದೆ, ತಾಲ್ಲೂಕಿನ ಅತ್ಯುತ್ತ ಡೇರಿಗಳಲ್ಲಿ ಒಂದಾಗಲು ಇಲ್ಲಿನ ಅಧ್ಯಕ್ಷರು,ಆಡಳಿತ ಮಂಡಳಿ,ಕಾರ್ಯದರ್ಶಿಗಳ ಪರಿಶ್ರಮವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೆಲುವನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಡಿ.ನಾಗರಾಜಪ್ಪ, ಡೇರಿ ಕಾರ್ಯಕ್ರಮ ಹಬ್ಬದಂತೆ ಮಾಡಿದ್ದೇವೆ, ತಿಂಗಳಿಗೆ 50 ಸಾವಿರ ಲಾಭ ಬರುತ್ತಿದೆ, ಬೋನಸ್, ಕೊಡುಗೆಯನ್ನು ಪ್ರತಿ ವರ್ಷವೂ ನೀಡುತ್ತಿದ್ದೇವೆ ಎಂದು ತಿಳಿಸಿದರೆ, ಕಾರ್ಯದರ್ಶಿ ತಿಮ್ಮೇಗೌಡ ಡೇರಿ ಅಭಿವೃದ್ದಿಗೆ ಆಡಳಿತ ಮಂಡಳಿ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಆರ್.ದಯಾನಂದ್, ಸಮಾಜಸೇವಕ ಸಿಎಂಆರ್ ಶ್ರೀನಾಥ್, ಪಿಎಸ್ಐ ಕಿರಣ್,ಗ್ರಾ.ಪಂ ಸದಸ್ಯರಾದ ಎ.ಎಸ್.ನಂಜುಂಡಗೌಡ, ರಾಜಣ್ಣ, ಪವಿತ್ರ, ಮುಖಂಡರಾದ ಮೂರಾಂಡಹಳ್ಳಿ ಗೋಪಾಲ್, ಬಣಕನಹಳ್ಳಿ ನಟರಾಜ್,ರೂಪ್ಕುಮಾರ್,ಆನೆಪುರ ಹನುಮಂತಪ್ಪ, ಕೋಚಿಮುಲ್ ಡಿಡಿ ಡಾ.ಎ.ಸಿ.ಶ್ರೀನಿವಾಸಗೌಡ, ಸಹಾಯಕ ವ್ಯವಸ್ಥಾಪಕ ಮೋಹನ್ ಬಾಬು, ವಿಸ್ತರಣಾಧಿಕಾರಿ ರಾಮಾಂಜಿನಪ್ಪ, ಡೇರಿ ಉಪಾಧ್ಯಕ್ಷ ಗೋವಿಂದಗೌಡ,ಕಾರ್ಯದರ್ಶಿ ತಿಮ್ಮೇಗೌಡ, ಎಲ್ಲಾ ನಿರ್ದೇಶಕರು ಹಾಜರಿದ್ದರು.