ಹೊಸ ದಿಗಂತ ವರದಿ, ಚಿತ್ರದುರ್ಗ:
ಸುಗ್ಗಿ ಕಾಲದ ಅವರೆಕಾಯಿ ಸೊಗಡಿನ ವಾಸನೆ ಈಗ ಎಲ್ಲೆಡೆ ಹರಡಿದೆ. ವರ್ಷದ ಎಲ್ಲಾ ಋತುಗಳಲ್ಲೂ ಬೆಳೆಯುವ ಅವರೆಕಾಯಿಗಿಂತ ಅವರೆ ಸುಗ್ಗಿಯ ಸಮಯ ಚಳಿಗಾಲದಲ್ಲಿ ಬೆಳೆಯುವ ನಾಟಿ ಅವರೆಕಾಯಿ ಸೊಗಡಿನ ಘಮಲೇ ಬೇರೆ. ಈಗ ವರ್ಷವಿಡೀ ಬೆಳೆಯುವ ತಳಿಗಳಿದ್ದರೂ ಚಳಿಗಾಲದಲ್ಲಿ ಆರಂಭವಾಗುವ ಅವರೆಕಾಯಿಗೆ ಹೆಚ್ಚಿನ ಬೇಡಿಕೆ. ಮಾರುಕಟ್ಟೆಗಳಲ್ಲಿ ಹಾಗೂ ಮನೆಗಳ ಮುಂದೆ ಅವರೆಕಾಯಿ ತಂದು ವ್ಯಾಪಾರ ಮಾಡುವ ಜನರೇ ಹೆಚ್ಚು.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸರ್ಕಲ್ ಬಳಿ ಅವರೆಕಾಯಿ ಸುಗ್ಗಿ ಸಂದರ್ಭದಲ್ಲಿ ಪ್ರತಿನಿತ್ಯ ದೊಡ್ಡ ಪ್ರಮಾಣದ ಮಾರುಕಟ್ಟೆ ನಡೆಯುತ್ತದೆ. ಜಿಲ್ಲೆಯಲ್ಲಿ ತೊಗರಿ ಬೆಳೆ ಬಿಟ್ಟರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ದ್ವಿದಳ ಧಾನ್ಯ ಅವರೆ. ಇದರ ಸೊಗಡಿನ ಘಮಲು ಕೇವಲ ಚಿತ್ರದುರ್ಗ ಜಿಲ್ಲೆಯಷ್ಟೇ ಅಲ್ಲ, ಇಲ್ಲಿಂದ ಬೇರೆ ಜಿಲ್ಲೆ, ಹೊರ ರಾಜ್ಯಗಳಿಗೂ ಅವರೆಕಾಯಿ ರವಾನೆಯಾಗುತ್ತಿದೆ. ಆ ಮೂಲಕ ಅಲ್ಲೂ ಅವರೆ ಘಮಲು ಹರಡುತ್ತಿದೆ. ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ಭಾಗಗಳಲ್ಲೂ ಅವರೆ ಬೆಳೆಯಲಾಗುತ್ತದೆ.
ಭರಮಸಾಗರ ಹೋಬಳಿ ಹಾಗೂ ಸುತ್ತಮುತ್ತಲಿನ ನೂರಾರು ಹಳ್ಳಿಗಳ ರೈತರು ತಾವು ಬೆಳೆದ ಅವರೆಕಾಯಿ ತಂದು ಸಗಟುದಾರರಿಗೆ ಮಾರಾಟ ಮಾಡುತ್ತಾರೆ. ಅಲ್ಲಿಂದ ಬೆಂಗಳೂರು, ರಾಮನಗರ, ದೊಡ್ಡಬಳ್ಳಾಪುರ, ಮಹಾರಾಷ್ಟ್ರ, ಸಾಂಗ್ಲಿ, ಕೊಲ್ಲಾಪುರ, ಕರಾಡು, ಪೂನಾ, ಮೀರಜ್ ಸೇರಿದಂತೆ ಮತ್ತಿತರ ಕಡೆಗಳಿಗೆ ರವಾನೆಯಾಗುತ್ತದೆ. ಈ ಭಾಗದ ರೈತರಿಂದ ಅವರೆಕಾಯಿ ಖರೀದಿಸಿದ ವ್ಯಾಪಾರಿಗಳು ಹೊರ ಜಿಲ್ಲೆ, ರಾಜ್ಯಗಳಿಗೆ ಕಳುಹಿಸುತ್ತಾರೆ. ಇಲ್ಲಿನ ಅವರೆಕಾಯಿಗೆ ಹೊರ ಜಿಲ್ಲೆ, ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
ಸುಮಾರು ಆರೇಳು ತಿಂಗಳ ಕಾಲ ಪ್ರತಿನಿತ್ಯ ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ನಡೆಯುತ್ತದೆ. ಪ್ರತಿದಿನ ೮೦೦ ರಿಂದ ಸಾವಿರ ಚೀಲ ಅವರೆಕಾಯಿ ಇಲ್ಲಿಂದ ಬೇರೆ ಬೇರೆ ಕಡೆಗೆ ರವಾನೆಯಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಇಲ್ಲಿ ಅವರೆ ಮಾರಾಟ ಮಾಡುತ್ತಿದ್ದೇವೆ. ಆಯಾ ದಿನದ ದರಕ್ಕೆ ಅನುಗುಣವಾಗಿ ವ್ಯಾಪಾರ ನಡೆಯುತ್ತದೆ. ಒಂದೊಂದು ದಿನ ಒಂದೊಂದು ದರ ಇರುತ್ತದೆ. ಒಂದು ಕೆ.ಜಿ.ಗೆ ೧೮, ೨೦, ೩೦ ರೂ. ದರ ಸಿಗುತ್ತದೆ. ಯಾವುದೇ ಕಮಿಷನ್, ಮಧ್ಯವರ್ತಿಗಳ ಹಾವಳಿ ಇಲ್ಲ. ಈ ಮಾರುಕಟ್ಟೆಯಿಂದ ನಮಗೆ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ರೈತರು.