ಹೊಸದಿಗಂತ ವರದಿ, ಕೊಡಗು:
ಸರಕಾರ ಸದಾ ರೈತರ ನೆರವಿಗೆ ಬದ್ಧವಾಗಿದೆ. ಸಮಸ್ಯೆಗಳಿಗೆ ಯಾರೂ ಹೆದರಬೇಕಾಗಿಲ್ಲ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ದುಡಿಯುವುದರ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಪಡೆದು ಸಮಸ್ಯೆಗಳಿಂದ ಹೊರ ಬರಲು ಪ್ರಯತ್ನ ಮಾಡಬೇಕು. ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು ಎಂದು ಕಿವಿಮಾತು ಹೇಳಿದರು.
ಭೂಮಿಯನ್ನು ನಂಬಿ ಜೀವನದಲ್ಲಿ ಮುಂದೆ ಬಂದ ಅನೇಕರು ನಮ್ಮ ಮುಂದಿದ್ದಾರೆ. ಈಸಬೇಕು ಇದ್ದು ಜಯಿಸಬೇಕು ಎಂದು ಹಿರಿಯರು ಹೇಳಿದ್ದಾರೆ. ಹೀಗಿರುವಾಗ ಸಮಸ್ಯೆ ಇದೆ ಎಂದು ಸಾವಿಗೆ ಶರಣಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿವರು, ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಲಕ್ಷಣ.ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ. ರೈತರಾಗಲಿ ಯಾರೇ ಆದರೂ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಕೆಲಸ ಎಂದರಲ್ಲದೆ, ಸಕಾ೯ರ ಸದಾ ರೈತರ ನೆರವಿಗೆ ಬದ್ಧವಾಗಿದೆ. ಯಾರೂ ಸಮಸ್ಯೆಗಳಿಗೆ ಹೆದರಬೇಕಾಗಿಲ್ಲ ಎಂದು ಅಭಯ ನೀಡಿದರು.
ಅರಣ್ಯ ಸಚಿವ ಆನಂದ ಸಿಂಗ್, ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.