ಬಳ್ಳಾರಿ: ಬೆಳೆ ಸಮೀಕ್ಷೆ ಉತ್ಸವದ ಅಂಗವಾಗಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಸಮೀಪದ ಹುಲಿಕೆರೆ ಗ್ರಾಮದ ಶರಣಪ್ಪ ಅವರ ಹೊಲದಲ್ಲಿ ಶುಕ್ರವಾರ ವೀಕ್ಷಿಸಿದರು.
ಶರಣಪ್ಪ ಅವರ ಪುತ್ರ ಗಿರೀಶ್ ಅವರು ಹೊಲದಲ್ಲಿ ನಿಂತುಕೊಂಡು ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತನ್ನ ಬೆಳೆಯ ಚಿತ್ರ ಹಾಗೂ ವಿವರವನ್ನು ದಾಖಲಿಸುವುದನ್ನು ಸಚಿವ ಬಿ.ಸಿ.ಪಾಟೀಲ್ ಅವರು ಪರಿಶೀಲಿಸಿದರು.
ಗಿರೀಶ್ ಅವರು ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ದಾಖಲಿಸುವ ಬಗೆ ಹಾಗೂ ತಾವು ಸಾವಯವ ಗೊಬ್ಬರ ಬೆಳೆಸಿಕೊಂಡು ಸೂರ್ಯಕಾಂತಿ ಬೆಳೆ ಬೆಳೆದಿರುವುದರ ವಿವರವನ್ನು ಸಚಿವ ಪಾಟೀಲ್ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಬೆಳೆ ಸಮೀಕ್ಷೆ ಉತ್ಸವವು ರಾಜ್ಯ ಸರಕಾರದ ಪ್ರತಿಷ್ಠಿತ ಯೋಜನೆಯಾಗಿದೆ. ಈಗಾಗಲೇ ಸಮೀಕ್ಷೆಯು ರಾಜ್ಯಾದ್ಯಂತ ಆರಂಭವಾಗಿದ್ದು, ಈ ಬಾರಿಯ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಮುಂದೆ ಬಂದು ಆ್ಯಪ್ ನಲ್ಲಿ ಬೆಳೆ ವಿವರ ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ದಾಖಲಿಸುವ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರವನ್ನು ಸಹ ದಾಖಲಿಸಬೇಕಾಗಿರುತ್ತದೆ. ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕಾಗಿರುತ್ತದೆ. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ರೈತರು ದಾಖಲಿಸಿದ ಬೆಳೆ ವಿವರಕ್ಕೂ, ಛಾಯಾಚಿತ್ರಕ್ಕೂ ತಾಳೆಯಾಗದ ಸಂದರ್ಭದಲ್ಲಿ ಮೇಲ್ವಿಚಾರಕರು ಅಂತಹ ಮಾಹಿತಿಯನ್ನು ತಿರಸ್ಕರಿಸಿ ಮರು-ಸಮೀಕ್ಷೆಗೆ ಖಾಸಗೀ ನಿವಾಸಿಗಳಿಗೆ ಕಳುಹಿಸುತ್ತಾರೆ. ಒಂದು ವೇಳೆ, ರೈತರು ತಮ್ಮ ಸ್ನೇಹಿತರು ಅಥವಾ ಸಂಭಂಧಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್ಗಳನ್ನು ಸಹ ತಮ್ಮ ಮೊಬೈಲ್ ಆ್ಯಪ್ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲೂ ಸಹ ಮೋಬೈಲ್ ಆ್ಯಪ್ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು. ರೈತರು ಸ್ವತಃ ತಮ್ಮ ಬೆಳೆ ವಿವರಗಳನ್ನು ದಾಖಲಿಸಲು ಆ.28 ರಂದು ಕೊನೆಯ ದಿನವಾಗಿದ್ದು,ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಳೆ ಸಮೀಕ್ಷೆ ಮಾಹಿತಿಯನ್ನು ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್. ಅಡಿಯಲ್ಲಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ. ಪಹಣಿಯಲ್ಲಿ ಬೆಳೆ ವಿವರದಾಖಲಿಸಲು ಹಾಗೂ ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಬಳಸಲಾಗುತ್ತದೆ ಎಂದರು.
ಹಿಂದಿನ ಮಿಸ್ ಮ್ಯಾಚ್ ಗೆ ಬ್ರೇಕ್:
ಈ ಹಿಂದೆ ಸಮೀಕ್ಷೆಯನ್ನು ಖಾಸಗಿಯವರಿಗೆ ವಹಿಸಿದ ಸಂದರ್ಭದಲ್ಲಿ ಫೋಟೋ ಒಂದು ರೀತಿಯಿದ್ದರೇ,ಅಲ್ಲಿ ಬೆಳೆದಂತ ಬೆಳೆಯೇ ಬೇರೆಯಾಗಿರುತ್ತಿತ್ತು. ಬೆಳೆಗಳಿಗೆ ಹೊಂದಾಣಿಕೆ ಕಂಡುಬರುತ್ತಿರಲಿಲ್ಲ. ಕಳೆದ ವರ್ಷ ಬೆಳೆವಿಮೆ ಪರಿಹಾರ ಕೊಡುವ ಸಂದರ್ಭದಲ್ಲಿ ಶೇ.40ರಷ್ಟು ವ್ಯತ್ಯಾಸ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ರೈತ ತನ್ನ ಬೆಳೆಗಳಿಗೆ ತಾನೇ ಪ್ರಮಾಣಪತ್ರ ನೀಡುವುದಕ್ಕೆ ಈ ಬೆಳೆ ಸಮೀಕ್ಷೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ನೆಟ್ವರ್ಕ್ ಇರದ ಪ್ರದೇಶಗಳ ಜಮೀನುಗಳ ಬೆಳೆ ವಿವರವನ್ನು ಪ್ರಮಾಣಪತ್ರ ಪಡೆದು ಮಾಡಲಾಗುವುದು ಎಂದರು.
ಡಿಜೆಹಳ್ಳಿ ಗಲಭೆ ಪ್ರಕರಣ ಪೂರ್ವನಿಯೋಜಿತ ಕೃತ್ಯ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರಬೇಕು ಮತ್ತು ಮಸಿಬಳೆಯಬೇಕು ಎನ್ನುವ ಉದ್ದೇಶ ಇದೆ. ತಪ್ಪಿತಸ್ಥರ ಮೇಲೆ ಸರಕಾರ ಕಠಿಣ ಕ್ರಮಕೈಗೊಳ್ಳಲಿದೆ. ಸಾವನ್ನಪ್ಪಿದವರು ಅಮಾಯಕರಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ತಹಸೀಲ್ದಾರ್ ಮಹಾಬಲೇಶ್ವರ, ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಇದ್ದರು.