ಹೊಸದಿಲ್ಲಿ: ನೂತನ ಕೃಷಿ ಮಸೂದೆ ವ್ಯಾಪಾರಿಗಳು ಮತ್ತು ರೈತರ ನಡುವಿನ ದೂರವನ್ನ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ವಿಶೇಷ ಸಂದರ್ಶನಯೊಂದರಲ್ಲಿ ಮಾತನಾಡಿದ ತೋಮರ್ , ಹೊಸ ಕಾನೂನು ವ್ಯಾಪಾರಿಗಳು ಮತ್ತು ರೈತರಲ್ಲಿ ಜಾಗೃತಿ ಹೆಚ್ಚಿಸುತ್ತದೆ ಎಂದರು . ಈ ಮಸೂದೆಯಿಂದಾಗಿ ರೈತರಿಗೆ ತುಂಬಾ ಉಪಯೋಗವಿದ್ದು, ವ್ಯಾಪಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಖರೀದಿಸಲು ರೈತರೊಂದಿಗೆ ಸಮಾಲೋಚಿಸಿತ್ತಾರೆ. ಬಳಿಕ ಬೆಲೆಯನ್ನು ನಿರ್ಧರಿಸುತ್ತಾರೆ. ಬೆಲೆ ನಿರ್ಧಾರದ ಬಳಿಕ ಬೆಳೆಗಳನ್ನು ತಮ್ಮದೇ ಲಾರಿಗಳಲ್ಲಿ ಕೊಂಡೊಯ್ಯುತ್ತಾರೆ. ಇದರಿಂದಾಗಿ ರೈತರಿಗೆ ಖರ್ಚು ಕಡಿಮೆಯಾಗುತ್ತದೆ ಎಂದರು.
ಹಿಂದೆ , ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ. ಆದರೂ, ಅವರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುವುದಿಲ್ಲ. ಆದರೆ ಈ ಮಾಸೂದೆಯಿಂದಾಗಿ ಅವರ ಮನೆ ಮತ್ತು ಹೊಲಗಳಿಂದ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತಿದ್ದೇವೆ ಎಂದು ತೋಮರ್ ಹೇಳಿದರು.
ಇಷ್ಟು ದಿನ ಕೃಷಿ ಮಾರುಕಟ್ಟೆಗಳಲ್ಲಿ ಹರಾಜು ಮೂಲಕ ಬೆಲೆಯನ್ನು ನಿಗದಿಪಡಿಸಲಾಗುತ್ತಿತ್ತು. ಆ ಬೆಲೆಗೆ ರೈತರು ತಮ್ಮ ಬೆಳೆಗಳನ್ನು ಮಾರಾಟಮಾಡಬೇಕಾಗಿತ್ತು. ಈಗ ರೈತರು ತಮ್ಮ ಬೆಳೆ ಎಲ್ಲಿಯಾದರೂ, ಯಾವಾಗ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಈ ಮಾರಾಟಗಳಿಗೆ ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ತೆರಿಗೆಗಳಿಲ್ಲ ಎಂದು ತಿಳಿಸಿದರು.
ಕೃಷಿ ಮಾರುಕಟ್ಟೆಗಳು ರಾಜ್ಯ ಕಾನೂನುಗಳಿಗೆ ಒಳಪಟ್ಟಿರುತ್ತವೆ. ನಮ್ಮ ಕಾನೂನಿನ ಪ್ರಕಾರ ಮಾರುಕಟ್ಟೆಗಳ ಹೊರಗೆ ಯಾವುದೇ ತೆರಿಗೆಗಳಿಲ್ಲ. ರೈತರು ತಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಬಹುದು. ನಾವು ಪ್ರಸ್ತಾಪಿಸುವ ಕಾನೂನುಗಳು ರೈತರನ್ನು ಕೃಷಿ ಮಾರುಕಟ್ಟೆಗಳ ಸಂಕೋಲೆಗಳಿಂದ ಮುಕ್ತಗೊಳಿಸುತ್ತವೆ ಎಂದರು.
ವಿಪಕ್ಷಗಳ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಎಂಎಸ್ಪಿಯನ್ನು ಕಾನೂನಿನ ಭಾಗವನ್ನಾಗಿ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ಧಾರೆ. ದೇಶದ ಹಿತದ ದೃಷ್ಟಿಯಿಂದ ಸರ್ಕಾರ ಕೃಷಿ ಮಸೂದೆಗಳನ್ನ ಹೊರತಂದಿದೆ. ಇದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ತೋಮರ್ ಹೇಳಿದರು.