Monday, August 8, 2022

Latest Posts

ರೈತಹೋರಾಟಗಾರ್ತಿ ನಳಿನಿಗೌಡ ಮನೆಗೆ ವಿ.ಆರ್.ಸುದರ್ಶನ್ ಭೇಟಿ: ನೈತಿಕ ಧೈರ್ಯ ತುಂಬಿದ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ

ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ರೈತ ಹೋರಾಟಗಾರ್ತಿ ನಳಿನಿಗೌಡರ ಹೊಸಮಟ್ನಹಳ್ಳಿಯ ನಿವಾಸಕ್ಕೆ ಭೇಟಿ ನೀಡಿದ್ದು, ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ನೈತಿಕ ಧೈರ್ಯ ತುಂಬಿದರು.
ಇತ್ತಿಚೆಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಗೆ ಅವರು ಕೋಲಾರಕ್ಕೆ ಬಂದಿದ್ದಾಗ ಕೆರೆಗಳ ಒತ್ತುವರಿ ವಿಚಾರದಲ್ಲಿ ನಳಿನಿಗೌಡ ಮನವಿ ಸಲ್ಲಿಸಲು ಮುಂದಾದ ಸಂದರ್ಭದಲ್ಲಿ ಸಚಿವರು ‘ನಾನು ಕೆಟ್ಟ ಮನುಷ್ಯ, ದೂರ ಇರಿ, ರ‍್ಯಾಸ್ಕಲ್ ಎಂಬ ಪದ ಬಳಕೆ ಮಾಡಿದ್ದರ ಹಿನ್ನಲೆಯಲ್ಲಿ ರಾಜ್ಯವ್ಯಾಪಿ ವಿರೊಧ ವ್ಯಕ್ತವಾಗಿತ್ತು.
ಕಾಂಗ್ರೆಸ್ ಮುಖಂಡರ ದೂರವಾಣಿ ಕರೆ ಈ ಹಿನ್ನಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೂ ನಳಿನಿಗೌಡರಿಗೆ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದರಲ್ಲದೇ ನಿಮ್ಮ ಜನಪರ,ರೈತಪರವಾದ ಹೋರಾಟ ಮುಂದುವರೆಸಿ, ನಿಮ್ಮೊಂದಿಗೆ ನಾವಿದ್ದೇವೆ, ಹೆದರಿದರಿ ಎಂದು ಧೈರ್ಯ ತುಂಬಿದರು.
ಹೋರಾಟ ಮಾಡುವುದು ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ಹಕ್ಕು, ನೀವೇನು ನಿಮ್ಮ ಸ್ವಂತಕ್ಕಾಗಿ ಹೋರಾಟ ಮಾಡಲಿಲ್ಲ, ಈ ನಾಡಿನ ಕೆರೆಗಳ ರಕ್ಷಣೆಗಾಗಿ ಹೋರಾಟಕ್ಕೆ ಮುಂದಾಗಿದ್ದೀರಿ, ಇಂತಹ ಬೆದರಿಕೆಗಳಿಗೆ ಬಗ್ಗದಿರಿ ಎಂದರು.
ನಿಮ್ಮ ರೈತಪರ ಹೋರಾಟ ನಿಲ್ಲದಿರಲಿ
ಈ ಸಂದರ್ಭದಲ್ಲಿ ಮಾಜಿ ಸಭಾಪತಿ ಸುದರ್ಶನ್ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಗೌಡ, ನಳಿನಿಗೌಡರಿಗೆ ಧೈರ್ಯ ತುಂಬಿ,  ನಿಮ್ಮ ಹೋರಾಟದ ಉದ್ದೇಶ ಉತ್ತಮವಾಗಿದೆ, ಕೆರೆಗಳ ಒತ್ತುವರಿ ತೆರವುಗೊಳಿಸಲು ನಡೆಸಿರುವ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದರೂ ನಿಮ್ಮ ಹೋರಾಟ ಭಾವನೆ ಮುಂದುವರೆಸಿ, ಹೋರಾಟಗಾರರಾಗಿ ನಿಮ್ಮ ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳದಿರಿ ಎಂದು ತಿಳಿಸಿದರು.
ಅಧಿಕಾರ ಸಿಕ್ಕಾಗ ನಡೆ ಬದಲಾಗದಿರಲಿ
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುದರ್ಶನ್, ಸಚಿವ ಮಾಧುಸ್ವಾಮಿ ಅವರು ಬುದ್ದಿವಂತ ಸಚಿವರಾಗಿದ್ದು, ಮೂಲತಃ ಹೊರಾಟದ ಹಿನ್ನಲೆಯಿಂದಲೇ ಬಂದವರು, ಅಧಿಕಾರ ಬಂದಾಗ ನಡವಳಿಕೆಯೂ ಬದಲಾಗಬಾರದು ಎಂದು ಸಲಹೆ ನೀಡಿದರು.
ಹೋರಾಟದ ಹಿನ್ನಲೆ ಇರುವ ಸಚಿವರಿಗೆ ತಾಳ್ಮೆ ಅಗತ್ಯವಿದೆ, ಜನರ ನಡುವೆ ಇಂತಹ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ ಅದು ನಿಮ್ಮ ಬಗ್ಗೆ ರಾಜ್ಯದ ಜನತೆಯಲ್ಲಿ ಋಣಾತ್ಮಕ ಭಾವನೆ ಗಟ್ಟಿಗೊಳಿಸುತ್ತದೆ, ಇದನ್ನು ಸರಿಪಡಿಸಿಕೊಂಡು ಮುನ್ನಡೆಯುವ ಜವಾಬ್ದಾರಿ ಬಗ್ಗೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ನಳಿನಿಗೌಡ ವಿರುದ್ದ ಬಿಜೆಪಿ ಐಟಿ ಸೆಲ್ ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಮಾಡಿದ್ದು, ಅದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಸುದರ್ಶನ್ ನೀವು ನಿಮ್ಮ ಗುಣ ಬದಲಿಸಿಕೊಳ್ಳದಿದ್ದರೆ ಜನತೆ ಸುಮ್ಮನೇ ನೋಡಿಕೊಂಡು ಕೂರುವುದಿಲ್ಲ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸುದರ್ಶನ್ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳಿಗೌಡ  ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸಗೌಡ ಮತ್ತಿತರರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss