ಚಿತ್ರದುರ್ಗ: ರೈತ ತಾನೇ ತನ್ನ ಹೊಲದ ಬಗ್ಗೆ ಸರ್ಟಿಫಿಕೇಟ್ ಕೊಡುವಂತಹ, ರೈತನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬೆಳೆ ಸಮೀಕ್ಷೆ ಆಪ್ ಇದಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರೈತರ ಬೆಳೆ ಸಮೀಕ್ಷೆ ಉತ್ಸವದ ಮೊಬೈಲ್ ಆಪ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳೆ ಸಮೀಕ್ಷೆ ಆಪ್ನಲ್ಲಿ ರೈತರಿಗೆ ಸ್ವಾತಂತ್ರ್ಯವನ್ನು ಕೊಡುವುದರ ಮೂಲಕ ರೈತರನ್ನು ನಂಬುತ್ತೇವೆ. ರೈತರು ತೆಗೆದ ಪೋಟೋಗೆ ಗೌರವವಿದೆ. ರೈತರು ತಮ್ಮ ಭೂಮಿಗೆ ಒಡೆಯರಾಗಿದ್ದು, ನನ್ನ ಬೆಳೆ ನನ್ನ ಹಕ್ಕು ಎಂಬುದನ್ನು ರೈತರು ಸಾಬೀತುಪಡಿಸಿದ್ದಾರೆ ಎಂದರು.
ರೈತರ ಬೆಳೆ ಸಮೀಕ್ಷೆಯನ್ನು ಈ ಮೊದಲು ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿತ್ತು. ಇದರಿಂದ ನಿಖರವಾಗಿ ಬೆಳೆ ವಿವರವನ್ನು ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಲಾಭ, ಪ್ರವಾಹ ಮತ್ತು ಬರಗಾಲದ ಸಂದರ್ಭಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಈ ವರ್ಷ ಬೆಳೆ ಸಮೀಕ್ಷೆ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ರೈತ ತನ್ನ ಹೊಲದಲ್ಲಿ ಆಪ್ ಮೂಲಕ ತಾನು ಬೆಳೆದ ಬೆಳೆಯ ವಿವರವನ್ನು ಸ್ವತಃ ತಾವೇ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು. ಇದು ರೈತರಿಗೆ ನೀಡಿದ ದೊಡ್ಡ ಸ್ವಾತಂತ್ರ್ಯವಾಗಿದೆ. ಪ್ರತಿಯೊಬ್ಬ ರೈತ ತನ್ನ ಹಿಸ್ಸೆಯಲ್ಲಿ ಅವರು ಬೆಳೆ ವಿವರವನ್ನು ದಾಖಲಿಸಬೇಕು. ಆಗಸ್ಟ್ ೨೪ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಉತ್ಸವ ಪ್ರಾರಂಭ ಮಾಡಿ ಪ್ರತಿಯೊಂದು ತಾಲ್ಲೂಕು ಮತ್ತು ಪ್ರತಿಯೊಂದು ಜಿಲ್ಲೆಯಲ್ಲೂ ರೈತರು ತಮ್ಮ ಬೆಳೆಗಳಿಗೆ ತಾವೇ ಸಮೀಕ್ಷೆ ಮಾಡುವ ಕೆಲಸವಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ರೈತರ ಸಂಘ ಇದಕ್ಕೆ ಸಂಪೂರ್ಣ ಬೆಂಬಲ ನೀಡಬೇಕು. ಅಂಡ್ರ್ಯಾಡ್ ಫೋನ್ ಇಲ್ಲದವರಿಗೆ ನೆರವಾಗಲು ಕೃಷಿ ಇಲಾಖೆಯಿಂದ ಪಿಆರ್ಗಳನ್ನು ನೇಮಕ ಮಾಡಲಾಗಿದ್ದು, ಇವರು ಮೊಬೈಲ್ ಬಳಕೆ ಮಾಡದ ರೈತರು ಅಕ್ಕಪಕ್ಕದ ರೈತರಿಂದ ಇವರ ಪಡೆಯಬಹುದಾಗಿದೆ ಎಂದರು.
ಯೂರಿಯಾ ಪೂರೈಕೆಗೆ ಕ್ರಮ : ಜಿಲ್ಲೆಯಲ್ಲಿ ಜುಲೈವರೆಗೆ ೩೯,೧೯೦ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇತ್ತು. ಜುಲೈವರೆಗೆ ೪೦,೩೦೩ ಯೂರಿಯಾವನ್ನು ಸರಬರಾಜು ಮಾಡಲಾಗಿದ್ದು, ಇನ್ನೂ ನಾಲ್ಕೈದು ದಿನಗಳಲ್ಲಿ ೧೦೦೦ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಗೆ ಕ್ರಮಕೈಗೊಳ್ಳಲಾಗಿದ್ದು, ಯೂರಿಯಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ರೈತ ಸಹಕಾರಿ ಸಂಘಗಳಿಗೆ ಕೃಷಿ ಯಂತ್ರಧಾರೆಗಳ ನೆರವು : ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಬೇಕಾಗಿರುವ ಸಣ್ಣ ಮತ್ತು ದೊಡ್ಡ ಟ್ಯಾಕ್ಟರ್ಗಳನ್ನು ಖರೀದಿಸಲು ಈ ವರ್ಷದಿಂದ ರೈತ ಸಹಕಾರಿ ಸಂಘಗಳಿಗೆ ರೂ.೮ ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲಾಗುತ್ತಿದೆ. ಕನಿಷ್ಟ ೧೦ ರೈತರು ಸಂಘ ರಚಿಸಿ ಸಹಕಾರ ಸಂಘಗಳ ನಿಯಮದಡಿ ನೋಂದಣಿಯಾಗಿ ಶೇ ೨೦ ರಷ್ಟು ಭರಿಸಿದಲ್ಲಿ ಶೇ ೮ ರಷ್ಟು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯು ಈ ವರ್ಷದಿಂದಲೇ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯೂರಿನ ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಸದಾಶಿವ ಹಾಗೂ ಕೃಷಿ ಇಲಾಖೆ ಸಿಬ್ಬಂದಿ, ರೈತ ಮುಖಂಡರು ಉಪಸ್ಥಿತರಿದ್ದರು.