ಹೊಸ ದಿಗಂತ ವರದಿ,ಬೀದರ್ :
100ನ ರೈತರ ತರಬೇತಿಯ ಸಾಮರ್ಥ್ಯವುಳ್ಳ ಅಂದಾಜು 128.90 ಲಕ್ಷ ರೂ. ನಿರ್ಮಾಣ ವೆಚ್ಚದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ರೈತ ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರ ಸಚಿವರಾದ ಪ್ರಭು ಚವ್ಹಾಣ್ ಅವರು ನವೆಂಬರ್ 22ರಂದು ಲೋಕಾರ್ಪಣೆಗೊಳಿಸಿದರು.
ಜನವಾಡ ರಸ್ತೆಯಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಮಾತನಾಡಿದ ಸಚಿವರು, ರಾಜ್ಯ ಸರ್ಕಾರವು ರೈತಪರವಾಗಿದೆ. ರೈತ ಹೋರಾಟದ ಹಿನ್ನೆಲೆಯಿಂದ ಬಂದಿರುವ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ರೈತರಿಗಾಗಿ ಸಾಕಷ್ಟು ವಿನೂತನ ಯೋಜನೆಗಳನ್ನು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ಹೈನುಗಾರಿಕೆ ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಬೀದರನಲ್ಲಿ ಆಯೋಜಿಸಿದ್ದ ಪಶುಮೇಳದಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಅಂತೆಯೇ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಈ ರೈತ ತರಬೇತಿ ಕೇಂದ್ರದಿoದಲೂ ಕೂಡ ರೈತರಿಗೆ ವಿವಿಧ ರೀತಿಯಲ್ಲಿ ತರಬೇತಿ ಸಿಗಬೇಕು. ವಿಶೇಷವಾಗಿ ಆಧುನಿಕ ಸಂದರ್ಭದಲ್ಲಿ ಹೈನುಗಾರಿಕೆ, ಕೃಷಿ ಮತ್ತು ಇನ್ನೀತರ ಹೊಸ ಹೊಸ ಪ್ರಯೋಗಕ್ಕೆ ರೈತರು ಮುಂದಾಗಬೇಕು ಎನ್ನುವ ಆಶಯದೊಂದಿಗೆ ರೂಪುಗೊಂಡ ಈ ತರಬೇತಿ ಕೇಂದ್ರದ ಸದುಪಯೋಗವನ್ನು ಜಿಲ್ಲೆಯ ಅನ್ನದಾತರು ಪಡೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಅಂದಾಜು 50 ಜನ ರೈತರಿಗೆ ವಸತಿ ಸೌಲಭ್ಯಕ್ಕೆ ಅನುಕೂಲವಿರುವ ಈ ಕಟ್ಟಡವನ್ನು ಕರ್ನಾಟಕ ರೂರಲ್ ಇನ್ಫ್ರಾಸ್ಟçಕ್ಚರ್ ಡೆವೆಲಪಮೆಂಟ್ ಲಿಮಿಟೆಡ್ನವರು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕರಾದ ರಹೀಂ ಖಾನ್ ಅವರು ಮಾತನಾಡಿ, ಕೃಷಿಯಲ್ಲಿ ರೈತರು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಮಾಹಿತಿಯನ್ನು ಪಡೆದುಕೊಳ್ಳಲು ತರಬೇತಿ ರೂಪಿಸಲು ಈ ರೈತ ತರಬೇತಿ ಕೇಂದ್ರದಿoದ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಹಂಚಿನಾಳ, ರೈತ ತರಬೇತಿ ಕೇಂದ್ರದ ಅಧಿಕಾರಿ ಉದಯಕುಮಾರ, ಪಶು ವೈದ್ಯಾಧಿಕಾರಿಗಳಾದ ಡಾ.ಗೌತಮ ಅರಳಿ ಹಾಗೂ ಇಲಾಖೆಯ ಸಿಬ್ಬಂದಿ ಮತ್ತು ಇನ್ನೀತರರು ಇದ್ದರು.