Saturday, August 13, 2022

Latest Posts

ರೈತ ಮಸೂದೆಗಳಿಗೆ ವಿಪಕ್ಷ ವಿರೋಧದ ಹಿಂದೆ…ಈ ವರೆಗೆ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಪಡೆಯುತ್ತಿದ್ದರೇ?

ಕೇಂದ್ರ ಸರಕಾರವು ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಸ್ವತಂತ್ರಗೊಳಿಸಿ ತಮ್ಮ ಬೆಳೆಗೆ ಬೆಲೆಯನ್ನು ನಿಗದಿಪಡಿಸುವಲ್ಲಿ ತಾವೇ ಒಡೆಯರಾಗುವಂತೆ ಮಾಡುವ ಮೂರು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.ರಾಜ್ಯಸಭೆಯಲ್ಲಿ ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ ೨೦೨೦ (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ೨೦೨೦ ಮಸೂದೆ
ಈ ಮಸೂದೆಗಳನ್ನು ವಿರೋಧಿಸಲು ಪಂಜಾಬ್ ಮತ್ತು ಹರ್ಯಾಣದ ಕೆಲವು ಪ್ರಬಲ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳು ಹೆಣಗುತ್ತಿವೆ.ಇದು ರೈತ ವಿರೋಧಿ ಮಸೂದೆ ಎಂದು ಬಿಂಬಿಸಲು ಯತ್ನಿಸುತ್ತಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಇದು ಕೇಂದ್ರ ಸರಕಾರ ತನ್ನ ‘ಶ್ರೀಮಂತ ಮಿತ್ರ’ರಿಗೆ ನೆರವಾಗಲು ಮಂಡಿಸಿದ ಮಸೂದೆ ಎಂದು ವಾದಿಸಿ ಜನರನ್ನು ಪ್ರಚೋದಿಸಲೆತ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ಅನಾಗರಿಕ ವರ್ತನೆಯೂ ವಿರೋಧದ ಉದ್ದೇಶವನ್ನು ಪ್ರಶ್ನಿಸುತ್ತಿದೆ.
ಆದರೆ ಈ ವಿರೋಧಪಕ್ಷಗಳ ವಾದ ಎಷ್ಟು ಕ್ಲೀಷೆಯಾಗಿದೆ ಎಂಬುದಕ್ಕೆ , ರೈತರು ಈವರೆಗೆ ತಮ್ಮ ಬೆಳೆಗೆ ಸೂಕ್ತ ಬೆಲೆಯನ್ನು ಪಡೆಯುತ್ತಿದ್ದರೇ ಎಂಬ ಒಂದೇ ಒಂದು ಪ್ರಶ್ನೆ ಸಾಕು.ಸ್ವಾತಂತ್ರ್ಯೋತ್ತರದಲ್ಲಿ ರೈತರು ಎಂದಾದರೂ ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಲು ಈ ವರೆಗೆ ಶಕ್ತರಾಗಿದ್ದಿದೆಯೇ ?ಅವರು ದಲ್ಲಾಳಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿದ್ದರು ಎಂಬುದು ಸುಳ್ಳೇ?ಕೃಷಿ ಉತ್ಪನ್ನಗಳ ಮಾರುಕಟ್ಟೆ ಯನ್ನು ದಲ್ಲಾಳಿಗಳೇ ನಿಯಂತ್ರಿಸುತ್ತಿದ್ದರು ಎಂಬುದು ಕಟು ಸತ್ಯವಲ್ಲವೇ?ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದ ರೈತರು ಸ್ವಾವಲಂಬಿಯಾಗಿಲ್ಲ ಏಕೆ?ಭಾರತ ಶೇ.೭೦ರಷ್ಟು ಕೃಷಿಪ್ರಧಾನ ದೇಶ ಎಂಬ ಹಣೆಪಟ್ಟಿ ಹೊಂದಿದ್ದರೂ ದೇಶದ ಜಿಡಿಪಿಗೆ ಅದರ ಕೊಡುಗೆ ಕಡಿಮೆಯಾಗಿರುವುದು ಆ ಕ್ಷೇತ್ರವನ್ನು ನಿರ್ಲಕ್ಷಿಸಿದ್ದರ ಫಲವಲ್ಲವೇ?ಕೃಷಿ ಕ್ಷೇತ್ರದ ಬೆಳವಣಿಗೆ ದರ ಕುಂಠಿತವಾಗಿರುವುದೂ ಇದೇ ಕಾರಣಕ್ಕಲ್ಲವೇ? ಈ ಬಗ್ಗೆ ಕಾಂಗ್ರೆಸ್ ಏಕೆ ಮೌನ ವಹಿಸಿದೆ?
ಈ ವಾಸ್ತವದ ಹೊರತಾಗಿಯೂ, ಮೋದಿ ಸರಕಾರ ರೈತ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹೆಣಗುತ್ತಿದೆ. ಆದರೆ ಅದು ಎಷ್ಟೇ ಸುಳ್ಳು ಪ್ರಚಾರ ನಡೆಸಿದರೂ ಕೇಂದ್ರ ಸರಕಾರದ ಯೋಜನೆಗಳು, ಸಬ್ಸಿಡಿಗಳು (ಈ ಹಿಂದೆ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ನೆರವಿನ ಪ್ರತಿ ಒಂದು ರೂಪಾಯಿಯಲ್ಲಿ ಜನತೆಗೆ ತಲುಪುತ್ತಿದ್ದುದು ಕೇವಲ ೧೫ ಪೈಸೆ ಮಾತ್ರ ಎಂಬುದಾಗಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಯವರು ಹೇಳಿದ್ದ ಮಾತು)ಈಗ ನೂರಕ್ಕೆ ನೂರರಷ್ಟು ಜನತೆಗೆ ತಲುಪುತ್ತಿರುವ ಸತ್ಯ ನಮ್ಮ ಕಣ್ಣೆದುರಿಗಿದೆ.೪೦ಕೋಟಿ ಜನಧನ್ ಖಾತೆಗಳ ಮೂಲಕ ಕಡುಬಡವರು ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿರುವುದು ಮತ್ತು ಸರಕಾರದ ನೆರವನ್ನು ಯಾವುದೇ ಮಧ್ಯವರ್ತಿಗಳ ಆತಂಕವಿಲ್ಲದೆ ನೇರವಾಗಿ ಪಡೆದುಕೊಳ್ಳುತ್ತಿರುವುದು ಕೂಡಾ ಸರ್ವವಿದಿತ.
ನಮ್ಮ ರೈತರನ್ನು ಇನ್ನೂ ಎಷ್ಟು ಕಾಲ ದಲ್ಲಾಳಿಗಳ ಕಪಿಮುಷ್ಟಿಯಲ್ಲಿಡಲು ವಿಪಕ್ಷಗಳು, ಪಟ್ಟಭದ್ರ ಹಿತಾಸಕ್ತಿಗಳು ಬಯಸುತ್ತವೆ?ನಮ್ಮ ರೈತರು ತಂತ್ರಜ್ಞಾನಗಳನ್ನು ಬಳಸಿಕೊಂಡು ಜಾಗತಿಕ ಮಟ್ಟಕ್ಕೇರುವುದು ಯಾವಾಗ? ಈಗ ಸಾಮಾಜಿಕ ಜಾಲತಾಣಗಳ ಮೂಲಕ , ಮಾಧ್ಯಮಗಳ ಮೂಲಕ ಜಗತ್ತಿನ ಪುಟ್ಟ ಪುಟ್ಟ ದೇಶಗಳ ರೈತರೂ ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು, ಆ ದೇಶಗಳು ಜಾಗತಿಕ ಸ್ಪರ್ಧೆಗೆ ತಮ್ಮನ್ನು ಒಡ್ಡಿಕೊಂಡಿರುವುದು,ಬಂಜರು ಭೂಮಿ ಹೊಂದಿಯೂ ಇಸ್ರೇಲ್‌ನಂತಹ ಪುಟ್ಟ ದೇಶಗಳು ಕೃಷಿ ಉತ್ಪನ್ನಗಳ ರಫ್ತಿನಲ್ಲಿ ತೊಡಗಿರುವಾಗ ಪ್ರಾಕೃತಿಕ ಸಂಪನ್ಮೂಲದ ಶ್ರೀಮಂತ ದೇಶ ಭಾರತ ಈ ಮಟ್ಟಕ್ಕೆ ಏರಬೇಕಾದರೆ ನಮ್ಮ ರೈತರನ್ನು ಇದಕ್ಕಾಗಿ ಸಜ್ಜುಗೊಳಿಸಬೇಡವೇ?
ವಿರೋಧಪಕ್ಷಗಳು ಭಾವನಾತ್ಮಕ ವಾದಗಳನ್ನು ಮಂಡಿಸಿವೆಯೇ ಹೊರತು ಈ ಮಸೂದೆಗಳನ್ನು ರೈತ ವಿರೋಧಿ ಎನ್ನುವ ಯಾವುದೇ ಸತಾರ್ಕಿಕ ವಾದ ಮಂಡಿಸಲು ವಿಫಲವಾಗಿವೆ.ದೇಶದ ಸಮಗ್ರ ವಿಕಾಸಕ್ಕಾಗಿ ಕೆಲಸ ಮಾಡುವ ಜೊತೆಯಲ್ಲೇ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕೆಂಬ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಮಸೂದೆಗಳನ್ನು ಐತಿಹಾಸಿಕ ಎಂದು ಬಣ್ಣಿಸಿರುವುದರಲ್ಲಿ ದೇಶದ ಭವಿಷ್ಯದ ದಿಕ್ಸೂಚಿಯಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss