Sunday, June 26, 2022

Latest Posts

ರೈತ ಹೋರಾಟದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಹೊಸದಿಗಂತ ವರದಿ,ಉಡುಪಿ:

ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ. ದೇಶ ವಿರೋಧಿ ಕೂಗು ಕೂಡ ಕೇಳುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಪಿಎಂಸಿ ವ್ಯವಸ್ಥೆ ರೈತರ ರಕ್ತ ಹೀರುತ್ತಿದೆ. ಎಪಿಎಂಸಿ ದಲ್ಲಾಳಿಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನದ ದಲ್ಲಾಳಿಗಳ ವಿರುದ್ಧ ಈ ಹಿಂದೆ ಹಲವಾರು ಹೋರಾಟಗಳು ನಡೆದಿತ್ತು ಎಂದರು.

ಕಾಂಗ್ರೆಸ್ 2013 ಮತ್ತು 2019ರ ಚುನಾವಣನಾ ಪ್ರಣಾಳಿಕೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಎಪಿಎಂಸಿ ಕಾಯ್ದೆ ರದ್ದು ಮಾಡುವುದಾಗಿ ಭರವಸೆ ಕೊಟ್ಟಿತ್ತು. ಅಲ್ಲದೇ 2010ರಲ್ಲಿ ಅಂದಿನ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಎಲ್ಲ ರಾಜ್ಯಗಳಿಗೆ ಪತ್ರ ಬರೆದು, ಕೃಷಿ ಹೂಡಿಕೆಯಲ್ಲಿ ಖಾಸಗಿ ಪಾಲುದಾರಿಕೆಯ ಬಗ್ಗೆ ಅಭಿಪ್ರಾಯ ಕೇಳಿದ್ದರು. ತಮಿಳುನಾಡಿನಲ್ಲಿ ಡಿಎಂಕೆ ಕೂಡ ಎಪಿಎಂಸಿ ಕಾಯ್ದೆ ರದ್ದು ಮಾಡುವ ಆಶ್ವಾಸನೆ ಕೊಟ್ಟಿತ್ತು.

ಕಮ್ಯೂನಿಸ್ಟ್‌ ಆಡಳಿತ ನಡೆಸುತ್ತಿರುವ ಕೇರಳದಲ್ಲಿ ಎಪಿಎಂಸಿ ಜಾರಿಯಲ್ಲಿಲ್ಲ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಸರಕಾರವಿದ್ದ ರಾಜ್ಯಗಳಿಗೆ ಪತ್ರ ಬರೆದು ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡುವಂತೆ ಪತ್ರ ಬರೆದಿದ್ದರು ಎಂದು ಶೋಭಾ ತಿಳಿಸಿದರು.

ಈಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಹಿತರಕ್ಷಣೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿರುವಾಗ ವಿರೋಧ ಮಾಡುತ್ತಿದ್ದಾರೆ. ಹೊಸ ಕಾನೂನುಗಳ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಸ್ಥಾಯಿಸಮಿತಿ ಅಸ್ತಿತ್ವದಲ್ಲಿದೆ. ಇದರಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ ಎಲ್ಲ ಪಕ್ಷದವರಿದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದು ಈ ತಿದ್ದುಪಡಿ ಮಾಡಲಾಗಿದೆ ಎಂದ ಶೋಭಾ ಕರಂದ್ಲಾಜೆ, ಈ ಹೋರಾಟ ಕೇವಲ ಡೋಂಗಿತನ ಇದು ಕೇವಲ ರಾಜಕೀಯ ಕಾರಣಕ್ಕಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ರೈತ ಚಳುವಳಿಯಲ್ಲಿ ದೇಶ ವಿರೋಧಿ ಪ್ರತ್ಯೇಕವಾದಿಗಳ ಪರ ಘೋಷಣೆ ಮೊಳಗುತ್ತಿದೆ. ದಿಲ್ಲಿಯ ಜೆ.ಎನ್.ಯು.ನಲ್ಲಿ ದೇಶ ವಿರೋಧಿ ಘೋಷಣೆ ಕೂಗಿ ಬಂಧನಕ್ಕೊಳಗಾದವರ ಬಿಡುಗಡೆಗೆ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ಉಂಟು ಮಾಡಿದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಕೃಷಿ ಮಸೂದೆಯೂ ಇದಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದ ಕರಂದ್ಲಾಜೆ, ರೈತರ ಹೋರಾಟದಲ್ಲಿ ದೇಶ ವಿರೋಧಿಗಳು ತಮ್ಮ ಅಜೆಂಡಾವನ್ನು ಸೇರಿಸಿ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.

ಖಲಿಸ್ತಾನ್ ಮೂಮೆಂಟ್ ಕಾರ್ಯಕರ್ತರು ಈ ಹೋರಾಟದ ಹಿಂದೆ ಇದ್ದಾರೆ. ಕೆನಡಾದ ಪ್ರಧಾನಿ ಭಾರತದ ಆಂತರಿಕ ವಿಷಯದ ಬಗ್ಗೆ ಭಾರತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ‌. ಭಾರತದಲ್ಲಿ ನಡೆಯುವ ಈ ಹೋರಾಟಕ್ಕೆ ವಿದೇಶದಿಂದ ದೇಣಿಗೆ ಬರುತ್ತಿದೆ ಎಂದು ಆರೋಪಿಸಿದರು.

ಪಂಜಾಬಿನಲ್ಲಿ ಎಪಿಎಂಸಿ ಲಾಬಿ ಇದೆ. ಅದನ್ನು ಎಲ್ಲ ಪಕ್ಷದವರು ಬೆಂಬಲಿಸುತ್ತಿದ್ದಾರೆ. ಮಧ್ಯವರ್ತಿಗಳ ಹಿತ ಕಾಪಾಡಲು ಈ ಹೋರಾಟ ನಡೆಯುತ್ತಿದೆ. ಕರ್ನಾಟಕದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಯಿತು. ಈ ಹೋರಾಟದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮೊದಲಾದ ಕಾಂಗ್ರೆಸ್ಸಿಗರು ಭಾಗವಹಿಸಿದ್ದರು. ರೈತ ಹೋರಾಟದ ಹಿಂದೆ ಕಾಂಗ್ರೆಸ್ಸಿನ ಕೈವಾಡ ಎದ್ದು ಕಾಣುತ್ತಿದೆ. ಒಟ್ಟಿನಲ್ಲಿ ರೈತ ಹೋರಾಟದಲ್ಲಿ ತುಕಡೆ ಗ್ಯಾಂಗ್ ಮತ್ತು ನಗರ ನಕ್ಸಲರ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಕೆ. ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss