Sunday, August 14, 2022

Latest Posts

ರೋಗ ನಿಯಂತ್ರಿಸುವಲ್ಲಿ ಕೇಂದ್ರ- ರಾಜ್ಯ ಸರ್ಕಾರ ವಿಫಲ: ಕಾಂಗ್ರೆಸ್ ಮುಖಂಡ ಉಗ್ರಪ್ಪ ಆರೋಪ

ಚಿತ್ರದುರ್ಗ: ರಾಜ್ಯದಲ್ಲಿ ಕೊರೋನಾ ಹೆಸರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಮಂತ್ರಿಗಳಿಗೆ ಒಳ್ಳೆಯ ಮೇವು ಸಿಕ್ಕಿದ್ದು, ಮಂತ್ರಿಗಳು ಅದನ್ನು ಚೆನ್ನಾಗಿ ಮೇಯುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾಗೆ ಸಂಬಂಧಿಸಿದಂತೆ ದೇಶ ಕೊಂಚ ಎಚ್ಚರಿಕೆ ವಹಿಸಿದ್ದರೂ ರೋಗ ಇಷ್ಟು ಪ್ರಮಾಣದಲ್ಲಿ ಹರಡುತ್ತಿರಲಿಲ್ಲ. ಅಂತಾರಾಷ್ಟ್ರೀಯ ವಾಯು ಸಾರಿಗೆ ಸ್ಥಗಿತಗೊಳಿಸುವಂತೆ ರಾಹುಲ್ ಗಾಂಧಿ ಹೇಳಿದರೆ ಅದನ್ನು ತಮಾಷೆಯಾಗಿ ತೆಗೆದುಕೊಂಡರು. ಕೇಂದ್ರ ಸರ್ಕಾರದ ನಿರ್ಲಕ್ಷತೆಯಿಂದ ಇಂದು ದೇಶದಲ್ಲಿ ರೋಗ ಉಲ್ಬಣ ಸ್ಥಿತಿ ತಲುಪಿದೆ. ರೋಗ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ದೂರಿದರು.
ಪ್ರಧಾನಿಯವರು ೫೦ ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸುವಂತೆ ತಿಳಿಸಿದ್ದಾರೆ. ರಾಜ್ಯಕ್ಕೆ ೧೬೬೦ ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಆದಾಗ್ಯೂ ವೆಂಟಿಲೇಟರ್, ಸ್ಯಾನಿಟೈಸರ್, ಪಿ.ಪಿ. ಕಿಟ್‌ಗಳು ಸೇರಿದಂತೆ ವಿವಿಧ ಪರಿಕರಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಲಾಗಿದೆ. ೪೧೬೭ ಕೋಟಿ ರೂ.ಗಳನ್ನು ವಿವಿಧ ಇಲಾಖೆಗಳಲ್ಲಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಶೇಕಡಾ ೫೦ ರಷ್ಟು ಭ್ರಷ್ಟಾಚಾರ ನಡೆದಿದೆ. ಈ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸರ್ಕಾರ ಈವರೆಗೆ ೩೨೦ ಕೋಟಿ ವೆಚ್ಚವಾಗಿದೆ ಎಂದಿತು. ನಂತರ ೭೮೦ ಕೋಟಿ ಎಂದು ಹೇಳಿತು. ಇದರಲ್ಲಿ ಯಾವುದು ಸತ್ಯ ಎಂದು ಪ್ರಶ್ನಿಸಿದರು.
ಮಾಸ್ಕ್‌ಗಳು ೫೦ ರೂ., ಥರ್ಮಲ್ ಸ್ಕ್ಯಾನರ್‌ಗಳು ೨೬೫೦ ರೂ.ಗಳಿಗೆ ಸಿಗುತ್ತವೆ. ಆದರೆ ೫೯೪೫ ರೂ. ನೀಡಿ ಥರ್ಮಲ್ ಸ್ಕ್ಯಾನರ್‌ಗಳನ್ನು ಖರೀದಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದಕ್ಕೆ ೯ ಸಾವಿರ ರೂ. ನೀಡಿ ಖರೀದಿಸಲಾಗಿದೆ. ೫೦-೬೦ ರೂ.ಗೆ ಸಿಗುವ ಸ್ಯಾನಿಟೈಸರ್‌ಗಳನ್ನು ೫೦೦-೬೦೦ ರೂ.ಗಳನ್ನು ನೀಡಿ ಖರೀದಿಸಲಾಗಿದೆ. ಕೇರಳದಲ್ಲಿ ಆಮ್ಲಜನಕ ಉಪಕರಣಗಳಿಗೆ ೨.೯ ಲಕ್ಷ ಬೆಲೆ ಇದೆ. ಆದರೆ ಇಲ್ಲಿ ೪.೩೬ ಲಕ್ಷ ರೂ. ನೀಡಿ ಖರೀದಿಸಲಾಗಿದೆ. ಸರ್ಕಾರಕ್ಕೆ ಬದ್ಧತೆ ಇದ್ದಲ್ಲಿ ಈ ಕುರಿತು ನ್ಯಾಯಾಂಗ ತನಿಖೆ ನಡೆಸಲಿ. ಚರ್ಚೆ ನಡೆಸಲು ವಿಧಾನ ಮಂಡಲ ಸಭೆ ಕರೆಯಲಿ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಮಾತನಾಡಿ, ವೆಂಟಿಲೇಟರ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬೆಂಗಳೂರಿನಲ್ಲಿ ತಯಾರಿಸಿ ದೇಶದ ನಾನಾ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಇವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಇದಕ್ಕಾಗಿ ಆರ್‌ಬಿಐ ಬ್ಯಾಂಕ್‌ನಲ್ಲಿ ೩ ಸಾವಿರ ಕೋಡಿ ರೂ. ಸಾಲ ಪಡೆಯಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಶಾಸಕ ಟಿ.ರಘುಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎ.ವಿ.ಉಮಾಪತಿ, ಜಯಮ್ಮ ಬಾಲರಾಜ್, ಹನುಮಲಿ ಷಣ್ಮುಖಪ್ಪ, ಜಿ.ಎಸ್.ಮಂಜುನಾಥ್, ಯೋಗೀಶ್‌ಬಾಬು, ಓ.ಶಂಕರ್ ಮತ್ತಿತರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss