ಈಗ ಎಲ್ಲೆಡೆ ಕೇಳಿಬರುತ್ತಿರುವ ಮಾತೆಂದರೆ ಯಾರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆಯೋ ಅವರಿಂದ ಕೊರೋನಾ ದೂರವಿರುತ್ತದೆ ಎಂದು. ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರನ್ನೆ ಮಹಾಮಾರಿ ಗುರಿಯಾಗಿಸಿಕೊಂಡಿರುವುದು ನಮ್ಮ ಕಣ್ಣೆದುರಿಗೆ ಕಾಣುತ್ತಿರುವ ಕಹಿ ಸತ್ಯ. ಕೊರೋನಾ ವೈರೆಸ್ ಮಾತ್ರವಲ್ಲ ಕೆಮ್ಮು, ಶೀತದಂತ ವೈರಸ್ ಕೂಡ ನಮ್ಮನ್ನು ಸೋಕಬಾರದೆಂದರೆ ಮೊದಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ರೋಗ ನಿರೋಧಕ ಶಕ್ತಿ ನಮ್ಮ ದೇಹಕ್ಕೆ ರಕ್ಷಣಾ ಕವಚವಿದ್ದಂತೆ. ಆದರೆ ಸಮಸ್ಯೆ ಇರುವು ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಎಂಬುದು. ನಮ್ಮ ನಿತ್ಯದ ಆಹಾರ ಸೇವನೆಯಿಂದಲೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅವುಗಳು ಯಾವುದೆಂದರೆ….
ಸಿಟ್ರಸ್ ಹಣ್ಣುಗಳು: ಹುಳಿ ಅಂಶ ಹೊಂದಿರುವ ಲಿಂಬು, ಕಿತ್ತಳೆ, ದ್ರಾಕ್ಷಿ, ಮೂಸಂಬಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶವಿರುತ್ತದೆ. ಇದು ರೋಗ ನಿರೋಧಕ ಶಕ್ತಿ ಉತ್ಪಾದನೆಗೆ ಸಹಕಾರಿ. ನಮ್ಮ ದೇಹ ವಿಟಮಿನ್ ಸಿ ಉತ್ಪಾದಿಸುವುದಿಲ್ಲ. ಹಾಗಾಗಿ ಪ್ರತಿದಿನ ಈ ಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಕೆಂಪು ಡೊಳ್ಳುಮೆಣಸು: ಸಿಟ್ರಸ್ ಹಣ್ಣುಗಳಿಗಿಂತ ಮೂರು ಪಟ್ಟು ಹೆಚ್ಚು ವಿಟಮಿನ್ ಸಿ ಕೆಂಪು ಡೊಳ್ಳುಮೆಣಸಿನಲ್ಲಿದೆ. ಅಷ್ಟೇ ಅಲ್ಲದೆ, ಬೀಟಾ ಕ್ಯಾರೋಟೀನ್ ಅಂಶ ಕೂಡ ಇರುತ್ತದೆ. ಇದನ್ನು ತಿನ್ನುವುದರಿಂದ ತ್ವಚೆಗೆ, ಕಣ್ಣಿಗೂ ಲಾಭವಿದೆ.
ಬ್ರಾಕೊಲಿ: ಇದು ವಿಟಮಿನ್ಸ್ ಹಾಗೂ ಮಿನರಲ್ಸ್ನಿಂದ ತುಂಬಿದೆ. ವಿಟಮಿನ್ ಎ, ಸಿ, ಹಾಗೂಇ ಕೂಡ ಇದೆ. ಅಷ್ಟೇ ಅಲ್ಲದೆ, ಫೈಬರ್ ಕೂಡ ಇದೆ. ಇದು ಅತ್ಯಂತ ಆರೋಗ್ಯಯುತ ತರಕಾರಿ. ಇದನ್ನು ಹೆಚ್ಚು ಬೇಯಿಸದೆ ತಿಂದರೆ ಒಳ್ಳೆಯದು.
ಬೆಳ್ಳುಳ್ಳಿ: ಎಲ್ಲಾ ಅಡುಗೆಮನೆಯಲ್ಲಿಯೂ ಬೆಳ್ಳುಳ್ಳಿಗೆ ಅಗ್ರ ಸ್ಥಾನವಿದೆ. ಇದು ರೋಗಗಳ ವಿರುದ್ಧ ಹೋರಾಡುತ್ತದೆ. ರಕ್ತದೊತ್ತಡಕ್ಕೂ ಸಹಕಾರಿಯಾಗಿದೆ. ಇದರಲ್ಲಿ ಸಲ್ಫರ್ ಇರುವುದರಿಂದ ರೋಗ ನಮ್ಮ ಕಡೆ ಮುಖ ಮಾಡುವುದಿಲ್ಲ.
ಶುಂಠಿ: ಸಾಮಾನ್ಯವಾಗಿ ಸಣ್ಣ ಪುಟ್ಟ ಕಾಯಿಲೆ ಹೋಗಲಾಡಿಸಲು ಶುಂಠಿ ಬಳಸುತ್ತೇವೆ. ಗಂಟಲು ನೋವು, ಶೀತ, ಕೆಮ್ಮು ಇವುಗಳಿಗೆ ಶುಂಠಿ ರಾಮಬಾಣ. ಎಲ್ಲ ಅಡುಗೆಯಲ್ಲಿಯೂ ಶುಂಠಿ ಬಳಸಿದರೆ ರೋಗಗಳಿಂದ ಮುಕ್ತರಾಗಬಹುದು.
ಬಾದಾಮಿ: ಇದರಲ್ಲಿ ವಿಟಮಿನ್ ಇ, ಸಿ ಎರಡೂ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಇದೆ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ದಪ್ಪ ಆಗುತ್ತೇವೆ ಎಂದು ಜನ ತಿಳಿದುಕೊಂಡಿದ್ದಾರೆ. ಆದರೆ ಬಾದಾಮಿಯಲ್ಲಿರುವ ಕೊಬ್ಬು ದೇಹಕ್ಕೆ ಒಳ್ಳೆಯದು.