ಧಾರವಾಡ: ಸ್ಥಳೀಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆಂದು ಆರೋಪಿಸಿದ ರೈತ ಮಹಿಳೆಯೊಬ್ಬಳು ಕಚೇರಿಯಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರೇಣುಕಾ ಕೆಂಚಣ್ಣವ ಅಧಿಕಾರಿ ತರಾಟೆಗೆ ತೆಗೆದುಕೊಂಡ ಮಹಿಳೆ. ಹಣ ನೀಡಿದರೆ ಮಾತ್ರ ಕೆಲಸ ಮಾಡುವುದೇ? ಇಲ್ಲದ್ದರೇ ಮಾಡುವುದಲ್ಲವೇ? ಎಂದು ಏರುಧ್ವನಿಯಲ್ಲಿ ಅಧಿಕಾರಿಯನ್ನು ಪ್ರಶ್ನೆ ಮಾಡಿದರು.
ಕಚೇರಿಯಲ್ಲಿ ಅಂದರ್ ದರ್ಬಾರ್ ನಡೆಸುವ ಅಧಿಕಾರಿಗಳ ರೈತರ ಬದುಕಿನ ಜೊತೆಗೆ ಚಲ್ಲಾಟ ಆಡುತ್ತಿದ್ದಾರೆ. ಖಾತೆ ಬದಲಾವಣೆ, ಆಸ್ತಿ ಖರೀದಿಗೆ ಬಂದ ಜನರನ್ನು ವಿನಾಃಕಾರಣ ಅಲೆದಾಡಿಸುತ್ತಿದ್ದಾರೆ ಎಂದು ದೂರಿದಳು.
ಬೆಳಗ್ಗೆ ೬ಕ್ಕೆ ಹಾವೇರಿಯಿಂದ ಬಂದು ಕಾದು ಸುಸ್ತಾಗಿದೆ. ಜಾಗ ಬದಲಾವಣೆ ಸಲುವಾಗಿ ಮೂರು ತಿಂಗಳಿoದ ಹಾವೇರಿಯಿಂದ ಅಲೆಯುತ್ತಿದ್ದೇನೆ. ಅಧಿಕಾರಿಗಳು ಸೌಜನ್ಯಕ್ಕೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಈ ವಿಷಯ ತಿಳಿದು ಸುದ್ದಿ ಮಾಡಲು ಹೋದ ಮಾಧ್ಯಮದವರ ಮೇಲೆ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದರ್ಪ ಮೆರದ ಘಟನೆ ನಡೆಯಿತು. ಜಿಲ್ಲಾಧಿಕಾರಿಗಳು ತಪಿತಸ್ಥ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿತು.