ಹೊಸದಿಗಂತ ವರದಿ, ಮಂಗಳೂರು:
ಕರ್ನಾಟಕದಲ್ಲಿ ಲವ್ ಜೆಹಾದ್ ಮಟ್ಟ ಹಾಕಲು ಕಠಿಣ ಕಾನೂನು ರೂಪಿಸುವ ಕುರಿತಾಗಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ. ಕಾನೂನು ಮಾಡಿ ಜಾರಿಗೊಳಿಸಲು ಒಕ್ಕೊರಳ ತೀರ್ಮಾನಕ್ಕೆ ಬರಲಾಗಿದೆ ಎಂದು ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಅರವಂದ ಲಿಂಬಾವಳಿ ತಿಳಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಜರುಗಿದ ಪಕ್ಷದ ಕೋರ್ ಕಮಿಟಿ ಸಭೆಯ ನಿರ್ಧಾರಗಳನ್ನು ಮಾಧ್ಯಮಗಳಿಗೆ ಪ್ರಕಟಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮತ್ತೆ ಜಾರಿಗೊಳಿಸುವ ಕುರಿತು ಸಭೆ ಚರ್ಚಿಸಿದೆ. ಸಚಿವ ಸಂಪುಟ, ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿದ ಬಳಿಕ ೨೦೦೮ರ ಕಾಯ್ದೆಯನ್ನು ಮುಂದಿಟ್ಟುಕೊಂಡು ನೂತನ ಕಾಯ್ದೆ ಜಾರಿಗೊಳಿಸುವ ನಿರ್ಧಾರಕ್ಕೆ ಬರಲಾಗುವುದು ಎಂದು ಅರವಿಂದ ಲಿಂಬಾವಳಿ ನುಡಿದರು.
ರಾಜ್ಯದಲ್ಲಿ ನಡೆದ ಎರಡು ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯ ವಿಶ್ಲೇಷಣೆ ಸಭೆಯಲ್ಲಿ ನಡೆದಿದೆ. ವಿಶ್ಲೇಷಣೆಯ ಬಳಿಕ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವನ್ನು ಸಭೆ ವ್ಯಕ್ತ ಪಡಿಸಿರುವುದಾಗಿ ಅವರು ಹೇಳಿದರು.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎರಡು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತು ಚುನಾವಣೆಯ ವಿಶ್ಲೇಷಣೆ ನಡೆದಿದೆ. ಚರ್ಚೆಯ ಬಳಿಕ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯ ಗಳಿಸುವ ವಿಶ್ವಾಸವನ್ನು ಕೋರ್ ಕಮಿಟಿ ಸಭೆ ವ್ಯಕ್ತ ಪಡಿಸಿರುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷರು ನುಡಿದರು.
ಮುಂಬರುವ ರಾಜ್ಯ ಸಭೆ ಚುನಾವಣೆಯ ಕುರಿತಾಗಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಚರ್ಚೆಗೆ ಬಂದಿವೆ. ಪ್ರಸ್ತಾಪ ಆಗಿರುವ ಹತ್ತು-ಹನ್ನೆರಡು ಹೆಸರುಗಳ ಪೈಕಿ ಮೂರ್ನಾಲ್ಕು ಹೆಸರುಗಳನ್ನು ಆಯ್ಕೆ ಮಾಡಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ನವೆಂಬರ್ ಮೊದಲ ವಾರದಿಂದ ನ.೨೫ರ ತನಕ ರಾಜ್ಯದಲ್ಲಿ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ನಡೆಯಲಿದೆ. ನ.೨೫ರಿಂದ ಡಿ.೫ರ ತನಕ ಮಹಾ ಶಕ್ತಿಕೇಂದ್ರ ಮಟ್ಟದಲ್ಲಿ ಪ್ರಶಿಕ್ಷಣ ವರ್ಗ ಇರುತ್ತದೆ ಎಂದು ವಿವರ ನೀಡಿದ ಅರವಿಂದ ಲಿಂಬಾವಳಿ, ಮುಂಬರುವ ಗ್ರಾಮ ಪಂಚಾಯತು ಚುನಾವಣೆಗೆ ಪಕ್ಷ ಸನ್ನದ್ಧವಾಗಿದೆ. ಮಂಡಲಗಳಲ್ಲಿ ವಾರ್ ರೂಂ, ಕಾಲ್ಸೆಂಟರ್ಗಳು ಶೀಘ್ರದಲ್ಲಿ ಆರಂಭಗೊಳ್ಳಲಿವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಪಕ್ಷದ ವಿಷಯವೇ ಅಲ್ಲ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರಕಾರ ಮುನ್ನಡೆಯಲಿದೆ. ಮುಖ್ಯಮಂತ್ರಿ ಬದಲಾವಣೆ ಎಂಬುದು ಮಾಜಿ ಮುಖ್ಯಮಂತ್ರಿ ಎಸ್.ಸಿದ್ಧರಾಮಯ್ಯ ಮತ್ತು ಅವರ ಕಾಂಗ್ರೆಸ್ ಪಕ್ಷದ ಚರ್ಚೆಯ ವಿಷಯವಷ್ಟೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ ಕಾರ್ಣಿಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಉಪಸ್ಥಿತರಿದ್ದರು.