Friday, July 1, 2022

Latest Posts

ಲಾಕ್‌ಡೌನ್‌ನಿಂದಾಗಿ ಅನ್ನ, ನೀರು ಇಲ್ಲದೆ ಪರದಾಡುತ್ತಿರುವ ಜನ: ನೆರವಿಗೆ ಬಂದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್

ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಅನ್ನ, ನೀರು ಇಲ್ಲದೆ ಪರದಾಡುತ್ತಿರುವ ಜನರ ಹಸಿವು ನೀಗಿಸಲು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಕಳೆದ ಹಲವು ದಿನಗಳಿಂದ ಕಾರ್ಯಪ್ರವೃತ್ತವಾಗಿದ್ದು ಇಲ್ಲಿಯವರೆಗೆ ಅಂದರೆ ಲಾಕ್‌ಡೌನ್ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ೨೩,೯೩೧ ಆಹಾರ ಪ್ಯಾಕೆಟ್ ವಿತರಿಸಿದೆ.
ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಸಿಕ್ಕಿಬಿದ್ದ ಮತ್ತು ಮನೆಯಿಲ್ಲದ ಕಾರ್ಮಿಕರು, ನಿರುದ್ಯೋಗಿಗಳು, ಕೊಳೆಗೇರಿ ನಿವಾಸಿಗಳು ಮತ್ತು ವಿಭಾಗದಾದ್ಯಂತದ ವಿವಿಧ ನಿಲ್ದಾಣಗಳಲ್ಲಿರುವ ಇತರ ನಿರ್ಗತಿಕ ವ್ಯಕ್ತಿಗಳಿಗೆ ಆಹಾರ ವಿತರಿಸುತ್ತಿದೆ. ಹುಬ್ಬಳ್ಳಿ ಪ್ರದೇಶದಲ್ಲಿ ಪ್ರತಿದಿನ ಸುಮಾರು ೧೦೦೦ ಕಿಟ್‌ಗಳನ್ನು ವಿತರಿಸಿದೆ.
ವಾಸ್ಕೋ ಡಾ ಗಾಮಾದಲ್ಲಿ ಆರ್‌ಪಿಎಫ್ ಪ್ರತಿದಿನ ಅಗತ್ಯವಿರುವ ಜನರಿಗೆ ಉಪಹಾರ ಮತ್ತು ಊಟ ವಿತರಿಸುತ್ತಿದೆ. ಶನಿವಾರ ೧೯೦ ಜನರಿಗೆ ಉಪಹಾರ ಮತ್ತು ೬೫೫ ಜನರಿಗೆ ಊಟದ ಪ್ಯಾಕೆಟ್ ವಿತರಿಸಲಾಗಿದೆ.
ಹೊಸಪೇಟೆಯಲ್ಲಿ ೧೫೦, ಬೆಳಗಾವಿಯಲ್ಲಿ ೬೫, ವಿಜಯಪುರದಲ್ಲಿ ೧೨೫, ಬಳ್ಳಾರಿಯಲ್ಲಿ ಪ್ರತಿದಿನ ೧೮೦ ಊಟ ವಿತರಿಸುತ್ತಿದೆ. ಧಾರವಾಡ ಮತ್ತು ಗದಗನಲ್ಲಿಯೂ ಆಹಾರ ನೀಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ತಿಳಿಸಿದ್ದಾರೆ.
ಅಧಿಕಾರಿಗಳು, ಸಿಬ್ಬಂದಿ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ, ಆರ್‌ಪಿಎಫ್ ಸಿಬ್ಬಂದಿಗಳ ಸಾಮೂಹಿಕ ಪ್ರಯತ್ನದಿಂದ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆಹಾರ ಪ್ಯಾಕೆಟ್‌ಗಳ ವಿತರಣೆ ಖಾತರಿಪಡಿಸುವುದು ಮಾತ್ರವಲ್ಲದೆ ಅಗತ್ಯವಿರುವ ಜನರಿಗೆ ಸ್ವಯಂಪ್ರೇರಣೆಯಿಂದ ಆಹಾರ ವಿತರಿಸಲಾಗುತ್ತಿದೆ. ರೈಲ್ವೆ ಇಲಾಖೆ ಈ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯವಿರುವವರಿಗೆ ಆಹಾರ ಒದಗಿಸುವ ಮೂಲಕ ಸಾಮಾಜಿಕ ಸೇವೆಗೆ ತನ್ನ ಬದ್ಧತೆ ಪ್ರದರ್ಶಿಸುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss