Friday, July 1, 2022

Latest Posts

ಲಾಕ್‌ಡೌನ್ ಉಲ್ಲಂಘನೆ ಪರಿಣಾಮ: ಕೇರಳದ ಎರಡು ಜಿಲ್ಲೆಗಳಲ್ಲಿ ಈಗ ಅತಿಹೆಚ್ಚು ಸೋಂಕು !

ತಿರುವನಂತಪುರಂ: ಕೊರೋನಾ ವೈರಾಣು ಪಿಡುಗಿನ ವಿರುದ್ಧದ ಹೋರಾಟದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದ್ದರೂ , ಇದನ್ನು ಉಲ್ಲಂಘಿಸಿ ಕೇರಳದ ಎರಡು ಜಿಲ್ಲೆಗಳಾದ ಇಡುಕ್ಕಿ ಮತ್ತು ಕೊಟ್ಟಾಯಂಗಳನ್ನು ಕೊರೋನಾ ಮುಕ್ತ ಗ್ರೀನ್ ಝೋನ್ ಎಂದು ಘೋಷಿಸಿ ಲಾಕ್‌ಡೌನ್‌ನ್ನು ಸಡಿಲಿಕೆ ಮಾಡಿದ ಪರಿಣಾಮ ಇದೀಗ ಕಳೆದ ಒಂದು ವಾರದಿಂದ ಈ ಎರಡು ಜಿಲ್ಲೆಗಳಲ್ಲಿ ಅತಿಹೆಚ್ಚಿನ ಕೋವಿಡ್-೧೯ಸೋಂಕು ಪ್ರಕರಣಗಳು ದಾಖಲಾಗುವಂತಾಗಿದೆ.
ಕೇರಳ ಸರಕಾರದ ಇಂತಹ ನಿಲುವಿನಿಂದಾಗಿ ಆ ಎರಡು ಜಿಲ್ಲೆಗಳಲ್ಲೂ ಈಗ ಕೋವಿಡ್ -೧೯ಪ್ರಕರಣಗಳು ಹೆಚ್ಚಾಗಲಾರಂಭಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.ಭಾನುವಾರ ಕೇರಳದಲ್ಲಿ ೧೧ಪ್ರಕರಣಗಳು ಪಾಸಿಟಿವ್ ಆಗಿದ್ದು ಈ ಪೈಕಿ ಇಡುಕ್ಕಿ ಜಿಲ್ಲೆಯಲ್ಲಿ ೬ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ ೫ಪ್ರಕರಣಗಳು ಪಾಸಿಟಿವ್ ಎಂದು ಕಂಡುಬಂದಿದೆ.
ಕಾಸರಗೋಡು ಮತ್ತೆ ನಿರಾಳ
ಕೊರೋನಾ ವೈರಾಣು ಸೋಂಕಿನಿಂದ ತತ್ತರಿಸಿದ್ದ ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಿಂದ ಇವರು ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಗುಣಮುಖರಾದವರ ಪ್ರಮಾಣ ಶೇ .೯೧.೪ ಆಗಿದೆ. ಈ ವರೆಗೆ ಒಟ್ಟು ೧೬೦ ಮಂದಿ ಗುಣಮುಖರಾಗಿದ್ದು, ದೇಶದ ಗಮನ ಸೆಳೆದಿದೆ.
ಜಿಲ್ಲೆಯಲ್ಲಿ ಈಗ ೨,೧೯೭ ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ೨೧೬೫ ಮಂದಿ ಮನೆಗಳಲ್ಲಿ, ೩೨ ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಆದರೆ ಭಾನುವಾರ ಹೊಸದಾಗಿ ಇಬ್ಬರನ್ನು ಐಸೊಲೇಷನ್ ವಾರ್ಡಿ ಗೆ ದಾಖಲಿಸಲಾಗಿದೆ.೩೭೯೧ ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ವರೆಗೆ ೩೧೦೪ ಮಂದಿಯ ಫಲಿತಾಂಶ ನೆಗೆಟಿವ್ ಬಂದಿದೆ.೩೭೦ ಮಂದಿಯ ಫಲಿತಾಂಶ ಲಭಿಸಿಲ್ಲ. ಜಿಲ್ಲೆಯಲ್ಲಿ ಈಗ ಸೋಂಕು ಖಚಿತಗೊಂಡು ಆಸ್ಪತ್ರೆಗಳಲ್ಲಿ ದಾಖಲಾಗಿರುವವರ ಸಂಖ್ಯೆ ೧೫ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss