Monday, August 8, 2022

Latest Posts

ಲಾಕ್‌ಡೌನ್ ಕರ್ಫ್ಯೂಗೆ ಅರಮನೆ ನಗರಿ ಮೈಸೂರು ಸಂಪೂರ್ಣ ಸ್ತಬ್ದ: ನಗರ ಭಣ, ಭಣ, ಮನೆಯಿಂದ ಹೊರಗೆ ಬಾರದ ಜನರು!

ಮೈಸೂರು: ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ರಾಜ್ಯ ಸರ್ಕಾರದ ಭಾನುವಾರ ಜಾರಿಗೊಳಿಸಿರುವ ಲಾಕ್‌ಡೌನ್ ಕರ್ಫ್ಯೂಗೆ ಅರಮನೆ ನಗರಿ ಮೈಸೂರಿನ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರ್ಫ್ಯೂವಿನಿಂದಾಗಿ ಇಡೀ ಮೈಸೂರು ನಗರ ಸಂಪೂರ್ಣವಾಗಿ ಸ್ತಬ್ದವಾಗಿದ್ದು, ಇಡೀ ನಗರ ಜನರಲ್ಲದೆ ಭಣ, ಭಣಗುಟ್ಟುತ್ತಿದೆ. ಕೇವಲ ತುರ್ತು ಅಗತ್ಯವಿರುವವರು ಮಾತ್ರ ಅಲ್ಲಲ್ಲಿ ಓಡಾಡುತ್ತಿರುವುದನ್ನು ಹೊರತುಪಡಿಸಿದರೆ, ಇಡೀ ಮೈಸೂರು ಬಿಕೋ ಎನ್ನುತ್ತಿದೆ.
ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅನುಮತಿಯಿದ್ದರೂ ವ್ಯಾಪಾರಿಗಳು ಭಾನುವಾರವಾದ ಕಾರಣದಿಂದ ತಮ್ಮ ಅಂಗಡಿ, ಮುಗ್ಗಟ್ಟುಗಳನ್ನು ತೆರೆಯದೆ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ. ಇದರಿಂದಾಗಿ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಸಂತೇಪೇಟೆ ಸಂಪೂರ್ಣವಾಗಿ ಬಂದ್ ಆಗಿದ್ದು, ಇದರ ಎರಡು ಕಡೆಯ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಎಂಜಿ ರಸ್ತೆಯ ಮಾರುಕಟ್ಟೆಯನ್ನು ಬಂದ್ ಮಾಡಲಾಗಿರುವುದರಿಂದ ಇಲ್ಲಿ ಜನರ ಸಂಚಾರವೂ ವಿರಳವಾಗಿತ್ತು.
ಆಟೋಗಳು, ಕ್ಯಾಬ್, ಗೂಡ್ಸ್ ಆಟೋ, ಬಸ್, ಲಾರಿ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ಬಂದ್ ಆಗಿತ್ತು. ಔಷಧಿ, ಹಾಲು ಅಂಗಡಿಗಳನ್ನು ಹೊರತುಪಡಿಸಿದರೆ, ಇತರೆ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಬೀದಿ, ಬದಿ ಹಣ್ಣಿನ ವ್ಯಾಪಾರಿಗಳು ಕೂಡ ಕಾಣಿಸಿಕೊಳ್ಳಲಿಲ್ಲ, ತರಕಾರಿ ಮಾರುಕಟ್ಟೆಗಳಲ್ಲಿ ಭಾನುವಾರದ ಜನಸಂದಣಿಯೇ ಮಾಯವಾಗಿತ್ತು. ಆಸ್ಪತ್ರೆಗಳು ಕಾರ್ಯನಿರ್ವಹಿಸಿದರೂ, ರೋಗಿಗಳ ಗಿಜಿ, ಬಿಜಿ ಇರಲಿಲ್ಲ. ತುರ್ತು ಕೆಲಸದ ಮೇಲೆ ಓಡಾಡಲು ಅವಕಾಶ ನೀಡಿದ್ದರೂ, ಅದನ್ನು ಜನರು ದುರುಪಯೋಗಡಿಸಿಕೊಳ್ಳಲಿಲ್ಲ. ಕಾರ್ಖಾನೆಗಳು ಬಂದ್ ಆಗಿದ್ದ ಕಾರಣ ಕಾರ್ಮಿಕರು ವಿಶ್ರಾಂತಿಯ ಮೊರೆ ಹೋಗಿದ್ದರು. ಕಟ್ಟಡ ಕಾರ್ಮಿಕರು ಕೆಲಸಕ್ಕೆ ಬಾರದೆ ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆದರು. ಹೊರಗಡೆಯಿಂದ ಬಂದAತಹ ಕೆಲವು ಜನರು ಮಾತ್ರ ತಮ್ಮೂರಿಗೆ ತೆರಳಲು ವಾಹನಗಳ ಸಂಚಾರವಿಲ್ಲದೆ ಪರದಾಡಿದರು.
ಭಣಗುಟ್ಟಿದ ಮೀನಾ ಬಜಾರ್  
ನಗರದ ಮಂಡಿಮೊಹಲ್ಲಾದರಲ್ಲಿರುವ ಮೀನಾ ಬಜಾರ್ ಇಂದು ಸಂಪೂರ್ಣವಾಗಿ ಬಂದ್ ಆಗಿ ಭಣಗುಡುತ್ತಿತ್ತು. ರಂಜಾನ್ ಹಬ್ಬದ ಹಿಂದಿನ ದಿನ ಮೀನಾ ಬಜಾರ್‌ನಲ್ಲಿ ಸಾವಿರಾರ ಮುಸ್ಲಿಂ ಜನರು ಜಮಾಯಿಸಿ, ಹಬ್ಬಕ್ಕೆ ಬೇಕಾದ ಬಟ್ಟೆ, ದಿನಸಿ, ಸಾಮಾಗ್ರಿಗಳು ಮುಂತಾದವುಗಳನ್ನು ಖರೀದಿಸುವಲ್ಲಿ ಬಿಜಿಯಾಗಿರುತ್ತಿದ್ದರು. ಜನರಿಂದ ತುಂಬಿ ತುಳುಕುತ್ತಿದ್ದ ಮೀನಾ ಬಜಾರ್‌ನ ಚಿತ್ರಣವೇ ಇಂದು ಕರ್ಫ್ಯೂವಿನಿಂದಾಗಿ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಸುಮಾರು ೧೫೦ಕ್ಕೂ ಹೆಚ್ಚು ಅಂಗಡಿಗಳಿದ್ದು, ಎಲ್ಲವೂ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಜನರ ಸಂಚಾರವೇ ಬಹಳ ವಿರಳವಾಗಿತ್ತು.
ಈ ಹಿಂದಿನ ಲಾಕ್ ಡೌನ್ ಅವಧಿಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದ ಪೊಲೀಸರಿಗೆ ಇಂದು ಅಂತಹ ಪರಿಸ್ಥಿತಿ ಬರಲಿಲ್ಲ, ಜನರ ನಡುವೆ ಮಾತಿನ ಚಕಮಕಿಯಿರಲಿ, ಮಾತನಾಡುವುದಕ್ಕೂ ಜನರು ಅವರಿಗೆ ಸಿಗಲಿಲ್ಲ. ಹಾಗಾಗಿ ಪೊಲೀಸರು ಕೂಡ ಯಾವುದೇ ಟೆನ್ಷನ್ ಇಲ್ಲದೆ ನಿರಾಳರಾಗಿದ್ದರು. ಆದರೂ ಕೂಡ ಮಾಸ್ಕ್ ಧರಿಸದೆ, ಅನಗತ್ಯವಾಗಿ ಸಂಚರಿಸುತ್ತಿದ್ದ ಜನರ ಮೇಲೆ ತೀವ್ರ ನಿಗಾವಿಟ್ಟಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss