ಸುಂಟಿಕೊಪ್ಪ: ಲಾಕ್ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಸುಂಟಿಕೊಪ್ಪ ಸಂತೆ ಮಾರುಕಟ್ಟೆಯಲ್ಲಿ ಭಾನುವಾರ ವ್ಯಾಪಾರ ಬಿರುಸಿನಿಂದ ನಡೆಯಿತು.
ಕೊರೋನಾ ಮುನ್ನಚ್ಚರಿಕೆ ಕ್ರಮವಾಗಿ ಕಳೆದ ವಾರ ಗ್ರಾ.ಪಂ.ಆಡಳಿತ ವತಿಯಿಂದ ಸಂತೆ ವ್ಯಾಪಾರವನ್ನು ಸೋಮವಾರ ಶಾಲಾ ಮೈದಾನದಲ್ಲಿ ನಡೆಸಲು ಅನುವು ಮಾಡಿಕೊಡಲಾಗಿತ್ತು. ಆದರೆ ಕೆಲವು ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಶಾಲಾ ಮೈದಾನದಲ್ಲಿ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿರುವುದನ್ನು ವಿರೋಧಿಸಿದ್ದರು.
ಇದರಿಂದ ಗ್ರಾಮ ಪಂಚಾಯಿತಿಯವರು ಮಾಮೂಲಿಯಂತೆ ಸಂತೆ ಮಾರುಕಟ್ಟೆಯಲ್ಲಿ ಎಂದಿನಂತೆ ಅವಕಾಶ ನೀಡಿದರು. ಆದರೆ ೪೦ ವ್ಯಾಪಾರಸ್ಥರಿಗೆ ಮಾತ್ರ ಅನುಮತಿ ಕಲ್ಪಿಸಲಾಗಿತ್ತು. ಇದರಿಂದ ದಿನಸಿ, ತರಕಾರಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಕೋಳಿ, ಕುರಿ ಮಾಂಸ ವ್ಯಾಪಾರದ ಜೊತೆಗೆ ಬಾರ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಿದ್ದ ಬಾರ್ಗಳಲ್ಲಿ ಗ್ರಾಹಕರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಿದರು.