Thursday, August 11, 2022

Latest Posts

ಲಾಕ್‍ಡೌನ್ ಸಂದರ್ಭ ಬಾಲ್ಯ ವಿವಾಹ ಹೆಚ್ಚಳ: ಡಾ.ಜಯಶ್ರೀ ಚನ್ನಾಳ ವಿಷಾದ

ಹೊಸ ದಿಗಂತ ವರದಿ, ಕಲಬುರಗಿ:

ಕೊರೋನಾದಿಂದ ಎದುರಾದ ಲಾಕ್‍ಡೌನ್ ಸಂದರ್ಭ  ಇಡೀ ರಾಜ್ಯದಲ್ಲೇ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ವರದಿಯಾಗಿವೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ಜಯಶ್ರೀ ಚನ್ನಾಳ ಅವರು ವಿಷಾದಿಸಿದರು.
ನಗರದ ನೂತನ ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಶುಕ್ರವಾರ ‘ಬಾಲ್ಯ ವಿವಾಹ ನಿಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಅಧಿನಿಯಮ-2016’ ಕುರಿತ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಎಂಬ ಅನಿಷ್ಠ ಆಚರಣೆಯನ್ನು ತಡೆಯುವಲ್ಲಿ ಕೇವಲ ಬಾಲ್ಯ ವಿವಾಹ ನಿಷೇಧಿಸುವ ಅಧಿಕಾರಿಗಳ ಕರ್ತವ್ಯ ಮಾತ್ರವಲ್ಲ, ಇಡೀ ಪೊಲೀಸರು ಸೇರಿ ಸಮಾಜದ ಜವಾಬ್ದಾರಿಯಾಗಿರುತ್ತದೆ ಎಂದರು.
ಬಾಲ್ಯ ವಿವಾಹವಾಗುವ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸಶಕ್ತರಾಗಿರುವುದಿಲ್ಲ. ಇದರಿಂದಾಗಿ ‘ಮಗುವಿಗೊಂದು ಮಗು’ ಎಂಬ ಸಮಸ್ಯೆ ಎದುರಾಗದಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕು ಎಂದು ಹೇಳಿದರು. ಕಲಬುರಗಿಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣತೊಟ್ಟು ಕರ್ತವ್ಯ ನಿಭಾಯಿಸುವಂತೆ ಕರೆ ನೀಡಿದರು.
ಜ್ಯೋತಿ ಬೆಳಗಿಸುವ ಮೂಲಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಮಾತನಾಡಿ, ಮಕ್ಕಳೇ ದೇಶದ ಭವಿಷ್ಯ, ಹೀಗಾಗಿ ಹೆತ್ತವರು ಮತ್ತು ಸಮಾಜ ಮಕ್ಕಳಿಗೆ ನೈತಿಕ ಮೌಲ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಿ, ಮಕ್ಕಳ ಭವಿಷ್ಯದ ಅಭಿವೃದ್ಧಿಗೆ ಬುನಾದಿ ಹಾಕಬೇಕು ಎಂದರು. ಹಲವೆಡೆ ರಾತ್ರಿ ವೇಳೆ ಬಾಲ್ಯ ವಿವಾಹ ನಡೆಯುವಂತಹ ಪ್ರಕರಣಗಳು ಕಂಡು ಬರುತ್ತಿವೆ. ಬಾಲ್ಯ ವಿವಾಹ ತಡೆಯಲು ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಕುರಿತಾಗಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಪ್ರಭಾವಿ ವ್ಯಕ್ತಿಗಳಿಂದ ಒತ್ತಡ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ಸಮಿತಿಯ ಅಧ್ಯಕ್ಷೆ ಸಿಸ್ಟರ್ ರೀನಾ ಡಿಸೋಜಾ ಅವರು ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಲಾಕ್ ಡೌನ್ ಸಂದರ್ಭದಲ್ಲಿ ಶೇ.40 ರಷ್ಟು ಬಾಲ್ಯ ವಿವಾಹಗಳು ದಾಖಲಾಗಿವೆ. ಬಾಲ್ಯ ವಿವಾಹಗಳಂತಹ ಪ್ರಕರಣಗಳನ್ನು ತಡೆಯಲು ಹೋದಾಗ, ಸ್ಥಳೀಯ ಪ್ರಭಾವಿ ವ್ಯಕ್ತಿಗಳೇ ವಿವಾಹ ತಡೆಯದಂತೆ ಒತ್ತಡ ಹೇರುವ ಪ್ರಸಂಗಗಳನ್ನು ಸ್ಮರಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಪಿ.ಬಾಡಂಗಡಿ, ಕಲಬುರಗಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ, ಕಲಬುರಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಶಶಿಶೇಖರ್ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss